ರಾಜ್ಯ

ಹುಲಿ ಉಗುರು ಪ್ರಕರಣ: ಹಿಂದೂಗಳಷ್ಟೇ ಏಕೆ, ಮೌಲ್ವಿಗಳ ವಿರುದ್ಧವೂ ಕೇಸ್ ಹಾಕಿ; ಶಾಸಕ ಅರವಿಂದ್​ ಬೆಲ್ಲದ್​ ಆಗ್ರಹ

Manjula VN

ಬೆಂಗಳೂರು: ರಾಜ್ಯದಲ್ಲಿ ನವಿಲುಗರಿ ಬಳಸುವ ಮಸೀದಿ, ದರ್ಗಾಗಳ ಮೇಲೆ ದಾಳಿ ಮಾಡಿ ಮೌಲ್ವಿಗಳ ವಿರುದ್ಧವೂ ದೂರು ದಾಖಲಿಸಿ 7 ವರ್ಷ ಜೈಲಿನಲ್ಲಿಡಿ ಎಂದು ರಾಜ್ಯ ಸರಕಾರಕ್ಕೆ ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಅವರು ಗುರುವಾರ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವನ್ಯಜೀವಿ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ನಿರ್ದಿಷ್ಟ ಧರ್ಮವನ್ನು ಮಾತ್ರ ಗುರಿಯಾಗಿಸುತ್ತಿದೆ, ನವಿಲು ಗರಿಗಳನ್ನು ಇಟ್ಟುಕೊಂಡಿರುವ ಮೌಲ್ವಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸರ್ಕಾರ ಕೇವಲ ಹಿಂದೂಗಳನ್ನು ಗುರಿಯಾಗಿಸುತ್ತಿದೆ, "ಮುಸ್ಲಿಂ ಸಮುದಾಯದವರೂ ದರ್ಗಾಗಳಲ್ಲಿ ನವಿಲು ಗರಿಗಳನ್ನು ಬಳಸುತ್ತಾರೆ, ಇದು ಕಾನೂನು ಉಲ್ಲಂಘನೆಯಲ್ಲವೇ?" ‘ಕಾನೂನು ಎಲ್ಲರಿಗೂ ಸಮಾನವಾಗಿದ್ದರೆ ಒಂದು ಸಮುದಾಯವನ್ನಷ್ಟೇ ಏಕೆ ಗುರಿ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ನಿಜವಾದ ಹುಲಿ ಉಗುರು ಇದ್ದರೆ ಕ್ರಮಕೈಗೊಳ್ಳಲಿ. ಕೇವಲ ಹಿಂದೂಗಳ ನಂಬಿಕೆಗಳನ್ನಷ್ಟೇ ಗುರಿ ಮಾಡಿ ದಾಳಿ ನಡೆಸಬೇಡಿ. ಕಾನೂನು ಹಿಂದೂಗಳಿಗೆ ಮಾತ್ರ ಅನ್ವಯಿಸುವುದಲ್ಲ, ಮುಸ್ಲಿಮರಿಗೂ ಅನ್ವಯಿಸುತ್ತದೆ.

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸಿಗರು ಮಸೀದಿ, ದರ್ಗಾಗಳಿಗೆ ಹೋಗುತ್ತಾರೆ. ಅವರನ್ನು ಓಲೈಸುವ ಕಾರ್ಯ ಮಾಡುತ್ತಾರೆ. ಅಲ್ಲೆಲ್ಲ ನವಿಲಿನ ಗರಿಗಳಿಂದ ತಲೆಗೆ ಆಶೀರ್ವಾದ ಮಾಡಿಸಿಕೊಂಡು ಬರುತ್ತಾರೆ. ದರ್ಗಾ, ಮಸೀದಿಗಳ ಮೇಲೆ ದಾಳಿ ಮಾಡಿ, ಮೌಲ್ವಿಗಳ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿ 7 ವರ್ಷ ಜೈಲಿನಲ್ಲಿಡಿ. ವನ್ಯಜೀವಿ ಸಂರಕ್ಷಣೆ ಮೇಲಿನ ನಿಜ ಕಾಳಜಿ ನಿಮ್ಮದು ಗೊತ್ತಾಗುತ್ತದೆ ಎಂದು ಸವಾಲೆಸೆದರು.

SCROLL FOR NEXT