ರಾಜ್ಯ

ಬೆಂಗಳೂರು-ಮೈಸೂರು ತಡೆರಹಿತ ಸಾಮಾನ್ಯ ಬಸ್‌ಗಳ ಪ್ರಯಾಣ ದರ ಏರಿಕೆ ಮಾಡಿದ ಕೆಎಸ್ಆರ್‌ಟಿಸಿ!

Ramyashree GN

ಮೈಸೂರು: ಬೆಂಗಳೂರು-ಮೈಸೂರು ನಡುವಿನ ತಡೆರಹಿತ ಸಾಮಾನ್ಯ ಬಸ್‌ಗಳ ಪ್ರಯಾಣ ದರವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) 15 ರೂ. ಏರಿಕೆ ಮಾಡಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. 

ಈ ಹಿಂದೆ 185 ಇದ್ದ ದರ ಇದೀಗ 200 ರೂ. ಆಗಿದೆ. ಆದರೆ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರದಲ್ಲಿ ನಿಲುಗಡೆಯಿರುವ ಬಸ್ ಪ್ರಯಾಣ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿರುವ ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಡಿ ಶ್ರೀನಿವಾಸ್, ಶಕ್ತಿ ಯೋಜನೆ ಜಾರಿ ನಂತರ ತಡೆರಹಿತ ಬಸ್ಸುಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಸ್ಸುಗಳ ಬಿಡಿಭಾಗಗಳು ಹಾಗೂ ಇಂಧನ ದರವೂ ಹೆಚ್ಚಿರುವುದರಿಂದ ದರ ಏರಿಕೆ ಮಾಡಲಾಗಿದೆ ಎಂದು ಪ್ರಯಾಣ ದರ ಏರಿಕೆಯನ್ನು ಸಮರ್ಥಿಸಿಕೊಂಡರು.

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಇತ್ತೀಚಿಗೆ ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಇದು ಕೂಡ ಪ್ರಯಾಣ ದರ ಹೆಚ್ಚಳಕ್ಕೆ ಕಾರಣವಾಗಿದೆ. ಬೆಂಗಳೂರು ಮತ್ತು ಇತರ ವಿಭಾಗಗಳಿಂದ ನಿರ್ವಹಿಸಲ್ಪಡುವ ಬಸ್‌ಗಳನ್ನು ಹೊರತುಪಡಿಸಿ, ಮೈಸೂರು ಕೆಎಸ್‌ಆರ್‌ಟಿಸಿ ವಿಭಾಗದಿಂದ ಮೈಸೂರು-ಬೆಂಗಳೂರು ನಡುವೆ ಪ್ರತಿದಿನ 30 ಬಸ್ಸುಗಳು 65 ಬಾರಿ ತಡೆರಹಿತವಾಗಿ ಸಂಚರಿಸುತ್ತಿವೆ ಎಂದರು. 

ಸ್ಥಿರವಾಗಿ ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚವನ್ನು ಪರಿಗಣಿಸಿದಾಗ 15 ರೂ. ಪ್ರಯಾಣ ದರ ಹೆಚ್ಚಳವು ಕನಿಷ್ಠವಾಗಿದೆ. ಆದಾಗ್ಯೂ, ಎರಡು ನಗರಗಳ ನಡುವೆ ಕಾರ್ಯನಿರ್ವಹಿಸುವ ರಾಜಹಂಸ, ಐರಾವತ, ಇವಿ ಪವರ್ ಪ್ಲಸ್ ಮತ್ತು ಇತರ ಎಸಿ ಮತ್ತು ನಾನ್ ಎಸಿ ಐಷಾರಾಮಿ ಬಸ್‌ಗಳ ದರದಲ್ಲಿ ಯಾವುದೇ ಹೆಚ್ಚಳ ಇಲ್ಲ ಎಂದು ಅವರು ಹೇಳಿದರು.

SCROLL FOR NEXT