ರಾಜ್ಯ

ಅಪ್ಪು ಅಗಲಿ ಇಂದಿಗೆ 2 ವರ್ಷ; ಎಲ್ಲೆಡೆ ಪುನೀತ್‌ ಪುಣ್ಯಸ್ಮರಣೆ, ದೊಡ್ಮನೆ ಕುಟುಂಬಸ್ಥರಿಂದ ಸಮಾಧಿಗೆ ಪೂಜೆ

Manjula VN

ಬೆಂಗಳೂರು: ಅಕ್ಟೋಬರ್ 29 ಕನ್ನಡಿಗರಿಗೆ ಭರಿಸಲಾಗದ ನೋವು ಕೊಟ್ಟ ದಿನ. ಚಿತ್ರರಂಗಕ್ಕೆ ತುಂಬಲಾರದ ನಷ್ಟವಾದ ದಿನ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ದೂರವಾಗಿ ಇಂದಿಗೆ ಎರಡು ವರ್ಷಗಳು ಕಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಅಪ್ಪು ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸುತ್ತಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಅವರ 2ನೇ ವರ್ಷದ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್​ ಕುಟುಂಬಸ್ಥರು ಅಪ್ಪು ಸಮಾಧಿಗೆ ಇಂದು ಪೂಜೆ ಸಲ್ಲಿಸಲಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ ಕುಮಾರ್​ ಸ್ಮಾರಕವನ್ನು ಬಿಳಿ ಮಾರ್ಬಲ್ಸ್​ ​ನಲ್ಲಿ ನಿರ್ಮಾಣ ಮಾಡಲಾಗಿದೆ. ರಾಜ್‌ಕುಮಾರ್‌ ಅವರ ಸ್ಮಾರಕದ ಬಳಿಯೇ ಅಪ್ಪು ಸಮಾಧಿ ಇದ್ದು, ಬೆಳಗ್ಗೆಯಿಂದಲೇ ಅಭಿಮಾನಿಗಳು ದಂಡುದಂಡಾಗಿ ಆಗಮಿಸುತ್ತಿದ್ದಾರೆ. ಸಾಲು ಸಾಲಾಗಿ ಆಗಮಿಸಿ ಪುನೀತ್‌ ರಾಜ್‌ಕುಮಾರ್‌ ಸಮಾಧಿಗೆ ಗೌರವ ಸಲ್ಲಿಸುತ್ತಿದ್ದಾರೆ.

ಇಂದು ಬೆಳಿಗ್ಗೆ ಅಶ್ವಿನಿ ಪುನೀತ್ ರಾಜ್​​ಕುಮಾರ್ ಹಾಗೂ ಮಕ್ಕಳು ಅಪ್ಪ ಅವರ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಸೇರಿ ಹಲವು ಕುಟಂಬಸ್ಥರು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಲಿದ್ದಾರೆ.

ನಟ ಶಿವರಾಜ್‌ ಕುಮಾರ್‌ ಅವರು ಕನಕಪುರದಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಅಲ್ಲಿಂದಲೇ ನೇರವಾಗಿ ಕಂಠೀರವ ಸ್ಟುಡಿಯೋಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ನೆನಪಿರಲಿ ಪ್ರೇಮ್‌ ಕುಟುಂಬಸ್ಥರು ಸೇರಿ ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಕೂಡ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪುನೀತ್‌ ರಾಜ್‌ಕುಮಾರ್‌ ಅವರ ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ರಾಜ್ಯಾದ್ಯಂತ ಅನ್ನದಾನ, ರಕ್ತದಾನ ಶಿಬಿರ ಆಯೋಜನೆ ಸೇರಿ ಹಲವು ಸೇವಾ ಕಾರ್ಯಕ್ರಮಗಳ ಮೂಲಕ ನೆಚ್ಚಿನ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್‌ ಅವರು 2021ರ ಅಕ್ಟೋಬರ್‌ 29ರಂದು ಹೃದಯಾಘಾತದಿಂದ ನಿಧನರಾದರು.

SCROLL FOR NEXT