ರಾಜ್ಯ

ಎಇಪಿಎಸ್ ವಂಚನೆ ಬಯಲಿಗೆಳೆದ ಮಂಗಳೂರು ಪೊಲೀಸ್: ಬಿಹಾರ ಮೂಲದ ಮೂವರ ಬಂಧನ

Srinivas Rao BV

ಮಂಗಳೂರು: ಆಧಾರ್ ಆಧಾರಿತ ಪಾವತಿ ಸೇವೆ (ಎಇಪಿಎಸ್) ನ್ನು ದುರುಪಡಿಸಿಕೊಂಡು ವಂಚನೆ ಮಾಡುತ್ತಿದ್ದ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ದೀಪಕ್ ಕುಮಾರ್ ಹೆಮ್ಬ್ರಾಮ್, ವಿವೇಕ್ ಕುಮಾರ್ ಬಿಸ್ವಾಸ್, ಮದನ್ ಕುಮಾರ್ ಬಿಹಾರ ಮೂಲದವರಾಗಿದ್ದಾರೆ.

ಕಳೆದ 6 ತಿಂಗಳಲ್ಲಿ ಸಿಇಎನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಇಪಿಎಸ್ ನ 10 ಪ್ರಕರಣಗಳು ವರದಿಯಾಗಿತ್ತು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. 

ಮಂಗಳೂರಿನ ಉಪನೋಂದಣಾಧಿಕಾರಿಯಲ್ಲಿ ಆಸ್ತಿ ನೋಂದಣಿ ಮಾಡಿಸಿದ್ದ, ಬಯೋಮೆಟ್ರಿಕ್ ಮಾಹಿತಿಯನ್ನು ಬೇರೆಡೆ ಸಲ್ಲಿಸಿದ್ದ ಹಲವು ಸಂತ್ರಸ್ತರು ತಮ್ಮ ಬ್ಯಾಂಕ್ ಖಾತೆಯಿಂದ ಆಧಾರ್ ಸಕ್ರಿಯ ಪಾವತಿ ವ್ಯವಸ್ಥೆಯ ಮೂಲಕ ಹಣ ಕಡಿತಗೊಂಡಿದೆ ಎಂದು ದೂರು ನೀಡಿದ್ದರು. ಆದ್ದರಿಂದ ನಾವು ವಿಶೇಷ ತಂಡವನ್ನು ರಚಿಸಿ ಮೂವರನ್ನು ಬಂಧಿಸಲಾಗಿದೆ ಅಗರ್ವಾಲ್ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತರು ಮತ್ತಷ್ಟು ಮಾಹಿತಿ ನೀಡಿದ್ದು, ಆರೋಪಿಗಳು ಸಂತ್ರಸ್ತರ ಬಯೋಮೆಟ್ರಿಕ್ ವಿವರಗಳನ್ನು ನೋಂದಣಿಗೂ ಮುನ್ನ ಬಳಕೆ ಮಾಡುವ ಕಾವೇರಿ 2.0 ಆಪ್ ಮೂಲಕ ಅಕ್ರಮವಾಗಿ ಸಂಗ್ರಹಿಸುತ್ತಿದ್ದರು. ನಂತರ ಅವರ ಬೆರಳಚ್ಚುಗಳನ್ನು ಸ್ಕ್ಯಾನ್ ಮಾಡಿ ಆಧಾರ್ ನಂಬರ್ ಬಳಸಿ ಸಂತ್ರಸ್ತರ ಖಾತೆಗಳಿಂದ ಹಣವನ್ನು ವರ್ಗಾವಣೆ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಗಳ 10 ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ 3.60 ಲಕ್ಷಗಳವರೆಗಿನ ವಹಿವಾಟುಗಳನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಆರೋಪಿಗಳ ಮೊಬೈಲ್ ಫೋನ್ ಗಳನ್ನು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT