ಕೊಪ್ಪಳ: ಕೊಪ್ಪಳ ನಗರದ ಹೊರವಲಯದಲ್ಲಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಭಾರತ ಪ್ರವಾಸ ಕೈಗೊಂಡಿದ್ದ ಫ್ರಾನ್ಸ್ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಮೊನ್ಸಾಲಿಯರ್ ಮೈಕೆಲ್(63) ಎಂದು ಗುರುತಿಸಲಾಗಿದೆ. ಐದು ಸದಸ್ಯರನ್ನು ಒಳಗೊಂಡ ಫ್ರಾನ್ಸ್ ನ ಸ್ನೇಹಿತರ ತಂಡ ಅಕ್ಟೋಬರ್ 24 ರಂದು ಚೆನ್ನೈ ಮೂಲಕ ಭಾರತಕ್ಕೆ ಆಗಮಿಸಿದ್ದು, ದೇಶದ ಪ್ರವಾಸಿ ತಾಣಗಳನ್ನು ನೋಡಲು ಚೆನ್ನೈನಲ್ಲಿ ಬೈಕ್ ಗಳನ್ನು ಬಾಡಿಗೆಗೆ ಪಡೆದುಕೊಂಡು ಹಂಪಿಗೆ ಬಂದಿದ್ದರು. ಇಲ್ಲಿಂದ ಗೋವಾಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ ಎಂದು ಕೊಪ್ಪಳ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಚಿಕ್ಕಬಳ್ಳಾಪುರ ಭೀಕರ ಅಪಘಾತದಲ್ಲಿ 13 ಮಂದಿ ಸಾವು: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ಪೊಲೀಸರ ಪ್ರಕಾರ, ಮೈಕೆಲ್ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದಿದ್ದಾರೆ.
ಸ್ಥಳೀಯ ಆಡಳಿತ, ನವದೆಹಲಿಯಲ್ಲಿರುವ ಫ್ರೆಂಚ್ ರಾಯಭಾರ ಕಚೇರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ ಅವರ ಕುಟುಂಬ ಸದಸ್ಯರು ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಿದೆ.
ಈ ಸಂಬಂಧ ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.