ರಾಜ್ಯ

‘ಒಂದು ರಾಷ್ಟ್ರ, ಒಂದು ಚುನಾವಣೆ’ಯಿಂದ ಹಣ, ಸಮಯ ಉಳಿತಾಯ: ಶೋಭಾ ಕರಂದ್ಲಾಜೆ

Manjula VN

ಉಡುಪಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಸರ್ಕಾರ ಮುಂಗಾಗಿದ್ದೇ ಆದರೆ, ಸಮಯ, ಹಣ ಉಳಿತಾಯವಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ಬರುವ ಚುನಾವಣೆಯಿಂದ ಅಭಿವೃದ್ಧಿ ಕೆಲಸ ಕುಂಠಿತ ಆಗುತ್ತದೆ. ಭಾರತದಲ್ಲಿ ವರ್ಷದ ಮೂರ್ನಾಲ್ಕು ತಿಂಗಳು ಚುನಾವಣೆ ನಡೆಯುತ್ತಿದೆ. ಇದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತದೆ. ಟೆಂಡರ್ ಕರೆಯಲು ಆಗಲ್ಲ ಎಂದು ಹೇಳಿದರು.

ಕೇರಳದಲ್ಲಿ ಜಿಲ್ಲಾ ಪಂಚಾಯತ್ ಗ್ರಾಮ ಪಂಚಾಯತ್ ನಗರಸಭೆ ಚುನಾವಣೆಗಳು ಒಟ್ಟಿಗೆ ನಡೆಯುತ್ತವೆ. ಇದೇ ರೀತಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆಯಬಹುದು. ಚಿಹ್ನೆಯಲ್ಲಿ ನಡೆಯುವ ಚುನಾವಣೆ ಒಟ್ಟಿಗೆ ನಡೆಸಬಹುದು. ದೇಶದಲ್ಲಿ ಸಮಯ, ಶ್ರಮ, ಹಣ ಉಳಿಸಬಹುದು. ಪ್ರಚಾರದ ಖರ್ಚು ಕೂಡ ಉಳಿಯುತ್ತದೆ, ಅಭಿವೃದ್ಧಿ ಕೆಲಸಗಳು ವೇಗ ಪಡೆಯುತ್ತವೆ. ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಕೆಲಸ ಮಾಡುತ್ತಾರೆ. ಮತಯಂತ್ರ ಬೇರೆ ಇರುತ್ತದೆ, ಜನ ಯಾರಿಗೆ ಮತ ಹಾಕಬೇಕು ಅನ್ನೋದನ್ನ ಅರಿತಿದ್ದಾರೆ. ಜನರು ಸುಶಿಕ್ಷಿತರಾಗಿದ್ದಾರೆ. ಹಾಗಾಗಿ ಸರಿಯಾಗಿ ಮತದಾನ ಮಾಡುತ್ತಾರೆ ಎಂದು ತಿಳಿಸಿದರು.

ಇದೇ ವೇಳೆ ಅವಧಿಗೂ ಮುನ್ನ ಅಧಿವೇಶನಕ್ಕೆ ವಿರೋಧ ಪಕ್ಷಗಳ ವಿರೋಧ ವಿಚಾರದ ಕುರಿತು ಮಾತನಾಡಿ, ಕಾಲಕಾಲಕ್ಕೆ ಸರ್ಕಾರ ತೀರ್ಮಾನ ಮಾಡಿ ಅಧಿವೇಶನ ಕರೆಯಬಹುದಾಗಿದೆ. ಪ್ರಮುಖ ವಿಚಾರದ ಕುರಿತು ಚರ್ಚೆ ಮಾಡಲು ಸರ್ಕಾರ ಅಥವಾ ಮಂತ್ರಿಮಂಡಲ ಈ ರೀತಿ ಅವಧಿಗೂ ಮುನ್ನ ಅಧಿವೇಶನ ಕರೆಯುವುದು ಸಾಮಾನ್ಯವಾಗಿದೆ. ಆದರೆ, ಮುಂಗಾರು ಅಧಿವೇಶನದಲ್ಲಿ ವಿಪಕ್ಷ ಸದನ ನಡೆಯದಂತೆ ಮಾಡಿದ್ದವು. ಅದರಲ್ಲಿ ಮಹತ್ವದ ವಿಚಾರಗಳು ಚರ್ಚೆಗೆ ಬರಲಿಲ್ಲ. ಅಧಿವೇಶನದಲ್ಲಿ ಭಾಗವಹಿಸದೆ ಜನರ ನಮ್ಮನ್ನು ಆಯ್ಕೆ ಮಾಡಿದ ಉದ್ದೇಶವನ್ನು ಹಾಳು ಮಾಡಿದರು. ಸೆ.17ರಂದು ನಡೆಯುವ ಅಧಿವೇಶನ ಖಂಡಿತವಾಗಿಯೂ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು,

ನಮಗೆ ಬಹುಮತ ಇದ್ದರೂ ಏಕಪಕ್ಷೀಯ ನಿರ್ಧಾರ ಮಾಡಿಲ್ಲ. ರಾಜ್ಯ, ದೇಶ ಎಲ್ಲಿಯೂ ನಾವು ಏಕ ಪಕ್ಷವಾಗಿ ನಡೆದುಕೊಂಡಿಲ್ಲ. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುವುದು ನಮ್ಮ ತೀರ್ಮಾನ. ಎಲ್ಲಾ ಪಕ್ಷಗಳು ಅಧಿವೇಶನ ದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ತಿಳಿಸಬೇಕು. ತಮ್ಮ ಕ್ಷೇತ್ರದ ಜನರ ಅಭಿಪ್ರಾಯವನ್ನು ಮಂಡಿಸಬೇಕು ಎಂದರು.

ಕಾವೇರಿ ಜಲವಿವಾದದ ಕುರಿತು ಮಾತನಾಡಿದ ಅವರು, ಮಳೆ ಕೊರತೆಯಿಂದ ಕರ್ನಾಟಕದಲ್ಲಿ ಎದುರಾಗಿರುವ ಸಂಕಷ್ಟದ ಬಗ್ಗೆ ರಾಜ್ಯ ಸರ್ಕಾರ ತಮಿಳುನಾಡಿಗೆ ಮನವರಿಕೆ ಮಾಡಿಕೊಡಬೇಕು. ಆದರೆ, ಅದಕ್ಕೂ ಮುನ್ನವೇ ತಮಿಳುನಾಡಿಗೆ ನೀರು ಬಿಡುವ ಮೂಲಕ ತಪ್ಪು ಮಾಡಿದೆ, ಕೇವಲ I.N.D.I.A ಮೈತ್ರಿಕೂಟವನ್ನು ಮೆಚ್ಚಿಸಲು ಈ ರೀತಿ ಮಾಡಿದೆ ಎಂದರು. ಇದೇ ವೇಳೆ ಕೆಆರ್‌ಎಸ್ ಡ್ಯಾಮ್ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.

SCROLL FOR NEXT