ರಾಜ್ಯ

'ಸಂಗೊಳ್ಳಿ ಸಂಗವ್ವ' ಭೇಟಿಯಾದ ಸಿಎಂ ಸಿದ್ದರಾಮಯ್ಯ! ಅಷ್ಟಕ್ಕೂ ಈಕೆ ಯಾರು?

Nagaraja AB

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಚ್ಚರಿಯಾಗಿ 'ಸಂಗೊಳ್ಳಿ ಸಂಗವ್ವ' ಅವರನ್ನು ಭೇಟಿಯಾಗಿದ್ದಾರೆ. ಸಂಗವ್ವಳನ್ನು ನೋಡಿ ಖುಷಿ ಪಟ್ಟಿದ್ದಾರೆ. ಹೌದು. ಅಷ್ಟಕ್ಕೂ ಈ ಮಹಿಳೆ ಯಾರು ಎಂಬುದು ಸಹಜವಾಗಿಯೇ ಕುತೂಹಲ ಮೂಡಿಸುತ್ತದೆ.

ಕಾಂಗ್ರೆಸ್ ನ ಐದು ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸುವ ಶಕ್ತಿಯೋಜನೆ ಜಾರಿ ಮಾಡಿದಾಗ ರಾಜ್ಯಾದ್ಯಂತ ಮಹಿಳೆಯರು ಖುಷಿಪಟ್ಟರು. ಅದರಲ್ಲೂ ಬೆಳಗಾವಿಯ ವಯಸ್ಸಾದ ಅಜ್ಜಿಯೊಬ್ಬರು ಮೊದಲ ಸಲ ಉಚಿತ ಪ್ರಯಾಣ ಮಾಡುವಾಗ  ಸರ್ಕಾರಿ ಬಸ್ ಮೆಟ್ಟಿಲುಗಳಿಗೆ ತಲೆಬಾಗಿ ನಮಸ್ಕರಿಸಿ ಹತ್ತುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ನಿಂತಿರುವ ಈ ಅಜ್ಜಿಯೇ ಅವರು!

ಕನ್ನಡದ ಜನಪ್ರಿಯ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಗೊಳ್ಳಿ ಸಂಗವ್ವ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದು, ಅವರೊಂದಿಗೆ ಆತ್ಮೀಯವಾಗಿ ಮಾತನಾಡಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಬರೆದುಕೊಂಡಿರುವ ಸಿಎಂ, ಶಕ್ತಿ ಯೋಜನೆ ಜಾರಿಯಾದ ದಿನ ಅತ್ಯಂತ ಸಂತಸದಿಂದ ಸರ್ಕಾರಿ ಬಸ್ಸಿನ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ್ದ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಸಂಗವ್ವ ಅವರನ್ನು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಭೇಟಿಯಾದದ್ದು ನನ್ನಲ್ಲಿ ಅಚ್ಚರಿ ಮತ್ತು ಖುಷಿಯ ಜೊತೆಗೆ ಸಾರ್ಥಕ್ಯದ ಭಾವ ಮೂಡಿಸಿತು ಎಂದಿದ್ದಾರೆ.

ಮಹಿಳೆಯರ ಸಬಲೀಕರಣಕ್ಕೆ ನಾವು ಬೆಂಬಲವಾಗಿ ನಿಲ್ಲಬೇಕು ಎನ್ನುವ ಕಾಳಜಿಯಿಂದ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಮೊದಲ ದಿನವೇ ಸಂಗವ್ವ ಅವರಿಂದ ದೊರೆತ ಪ್ರತಿಕ್ರಿಯೆ ಕಂಡು ನಮ್ಮ ಯೋಜನೆ ನೂರಕ್ಕೆ ನೂರರಷ್ಟು ಯಶಸ್ವಿಯಾಗಲಿದೆ ಎಂಬ ಭರವಸೆ ನನ್ನಲ್ಲಿ ಮೂಡಿತ್ತು. ಇಂಥದ್ದೊಂದು ಭೇಟಿಯ ಅವಕಾಶ ಕಲ್ಪಿಸಿದ ಖಾಸಗಿ ವಾಹಿನಿಗೆ ಧನ್ಯವಾದ ತಿಳಿಸಿದ್ದಾರೆ. 

SCROLL FOR NEXT