ರಾಜ್ಯ

ಸನಾತನ ಧರ್ಮ ಕುರಿತು ಹೇಳಿಕೆ: ಬನಶಂಕರಿ ಠಾಣೆಯಲ್ಲಿ ಉದಯನಿಧಿ ಸ್ಟಾಲಿನ್ ವಿರುದ್ಧ ದೂರು

Shilpa D

ಬೆಂಗಳೂರು: ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮಾಡಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಮಂಗಳವಾರ ಬೆಂಗಳೂರಿನ ಬನಶಂಕರಿ ಪೊಲೀಸರಿಗೆ ದೂರು ನೀಡಿದ್ದಾರೆ.

100 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಸನಾತನ ಧರ್ಮವನ್ನು ನಾಶ ಮಾಡುವಂತೆ ಉದಯನಿಧಿ ಕರೆ ನೀಡಿದ್ದಾರೆ, ಹೀಗಾಗಿ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ರಮೇಶ್, ಒತ್ತಾಯಿಸಿದರು.

ಉದಯನಿಧಿ ಸ್ಟಾಲಿನ್ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅವರ ಹೇಳಿಕೆಯು ದ್ರಾವಿಡ ಮುನ್ನೇತ್ರ ಕಳಗಂ ಕಾರ್ಯಕರ್ತರಿಗೆ ಹಿಂದೂ ಧರ್ಮದ ಮೇಲೆ ದಾಳಿ ನಡೆಸಲು ಪ್ರೇರೇಪಿಸಬಹುದು. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದೇನೆ. ಐಪಿಸಿ ಸೆಕ್ಷನ್ 120 ಬಿ, 153 ಎ, 295 ಮತ್ತು 504 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ನಾನು ಪೊಲೀಸರಿಗೆ ಮನವಿ ಮಾಡಿದ್ದೇನೆ ಎಂದು ರಮೇಶ್ ಹೇಳಿದರು.

ಉದಯನಿಧಿ ಅವರು ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮವನ್ನು ಡೆಂಗಿ, ಮಲೇರಿಯಾ ಮತ್ತು ಕೊರೊನಾಕ್ಕೆ ಹೋಲಿಸಿ ಮಾತನಾಡಿದ್ದಾರೆ. ಈ ವೈರಸ್‌ಗಳನ್ನು ಬೇರು ಸಹಿತ ನಾಶಗೊಳಿಸುವ ರೀತಿಯಲ್ಲೇ ಸನಾತನ ಧರ್ಮೀಯರನ್ನು ನಾಶಗೊಳಿಸಿದರೆ ಮಾತ್ರ ಈ ದೇಶಕ್ಕೆ ಒಳಿತಾಗುತ್ತದೆ ಎಂಬ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಸಂವಿಧಾನ ಮತ್ತು ದೇಶ ವಿರೋಧಿ ಹೇಳಿಕೆ ನೀಡಿರುವ ಉದಯನಿಧಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

SCROLL FOR NEXT