ರಾಜ್ಯ

ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಸತ್ಯ ಹೊರಬರುತ್ತೆ; ದೊಡ್ಡ ದೊಡ್ಡವರ ಹೆಸರೂ ಹೊರಗೆ ಬರತ್ತೆ: ಚೈತ್ರಾ ಕುಂದಾಪುರ

Sumana Upadhyaya

ಬೆಂಗಳೂರು: ಕರಾವಳಿ ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಹಿಂದೂಪರ ನಾಯಕಿ ಚೈತ್ರಾ ಕುಂದಾಪುರ ಅವರ ವಿಚಾರಣೆ ಇಂದು ಗುರುವಾರದಿಂದ ಆರಂಭವಾಗಲಿದೆ.

ನಿನ್ನೆ ಬಂಧನಕ್ಕೊಳಗಾದ ಅವರನ್ನು ರಾತ್ರಿ ಬೆಂಗಳೂರಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಸದ್ಯ 10 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು, ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ. ಸಿಸಿಬಿ ಎಸಿಪಿ ರೀನಾ ಸುವರ್ಣ ಅವರಿಂದ ವಿಚಾರಣೆ ನಡೆಯಲಿದೆ. ಬಳಿಕ ಹಣ ಪಡೆದ ಸ್ಥಳಗಳಲ್ಲಿ ಮಹಜರು ಮಾಡಲಿದ್ದಾರೆ. ಚೈತ್ರಾ ಕುಂದಾಪುರ ಅವರ ಜೊತೆಗೆ ಬಂಧಿತ ಮೋಹನ್ ಕುಮಾರ್ ಅಲಿಯಾಸ್ ಗಗನ್ ಕಡೂರು, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್​ ಅವರನ್ನು ವಿಚಾರಣೆ ನಡೆಸಲಾಗುತ್ತದೆ.

ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಇನ್ನೂ ದೊಡ್ಡ ದೊಡ್ಡ ಹೆಸರು ಹೊರಗೆ ಬರುತ್ತದೆ-ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಗೆ ವಂಚಿಸಿದ ಪ್ರಕರಣದಲ್ಲಿ ಸಿಸಿಬಿ ಬಂಧನದಲ್ಲಿರುವ ಚೈತ್ರಾ ಕುಂದಾಪುರರನ್ನು ಪೊಲೀಸ್ ಜೀಪಿನಲ್ಲಿ ಇಂದು ಸಿಸಿಬಿ ಪೊಲೀಸರು ಕರೆತಂದಾಗ ಜೀಪಿನಿಂದ ಇಳಿಯುತ್ತಲೇ ಮಾಧ್ಯಮ ಪ್ರತಿನಿಧಿಗಳನ್ನು ಕಂಡಾಗ, ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಮೊದಲು ಈ ಪ್ರಕರಣದಲ್ಲಿ ಸ್ವಾಮೀಜಿಗಳು ಸಿಕ್ಕಿ ಹಾಕಿಕೊಳ್ಳಲಿ. ಎಲ್ಲಾ ಸತ್ಯ ಗೊತ್ತಾಗುತ್ತೆ ಸರ್. ಸ್ವಾಮೀಜಿ ಸಿಕ್ಕಿ ಹಾಕಿಕೊಂಡ ನಂತರ ದೊಡ್ಡ ದೊಡ್ಡವರ ಹೆಸರುಗಳು ಹೊರ ಬರುತ್ತವೆ. ಇಂದಿರಾ ಕ್ಯಾಂಟೀನ್ ಬಿಲ್ ಪೆಡ್ಡಿಂಗ್ ಇರೋ ಕಾರಣ ಈ ಷಡ್ಯಂತ್ರ ರಚನೆಯಾಗಿದೆ. ಎ1 ಆರೋಪಿ ನಾನೇ ಆಗಿರಬಹುದು. ಸ್ವಾಮೀಜಿ ಸಿಕ್ಕ ನಂತರವೇ ಎಲ್ಲವೂ ಗೊತ್ತಾಗಲಿದೆ ಎಂದು ಹೇಳುತ್ತಾ ಚೈತ್ರಾ ಪೊಲೀಸ್ ಕಚೇರಿ ಒಳಗೆ ಹೋಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಹಡಗಲಿಯ ಹಾಲಶ್ರೀ ಸ್ವಾಮೀಜಿಗೆ ಪ್ರಧಾನಿ ಕಚೇರಿಯ ಸಂಪರ್ಕವಿದೆ ಎಂದು ಗೋವಿಂದ ಬಾಬು ಪೂಜಾರಿ ಅವರಿಂದ ಒಂದೂವರೆ ಕೋಟಿ ಹಣ ಹಾಕಿಸಲಾಗಿದೆ. ಗೋವಿಂದ ಪೂಜಾರಿ ಜೊತೆಯಲ್ಲಿ ಚೈತ್ರಾ ಸಹ ಹಡಗಲಿಗೆ ತೆರಳಿ ಸ್ವಾಮೀಜಿಯನ್ನು ಭೇಟಿಯಾಗಿರುವ ಮಾಹಿತಿಯಿದೆ.

SCROLL FOR NEXT