ರಾಜ್ಯ

ದೇವಾಲಯಗಳ ಒತ್ತುವರಿ ಶೀಘ್ರದಲ್ಲೇ ತೆರವು: ಸಚಿವ ರಾಮಲಿಂಗಾರೆಡ್ಡಿ

Manjula VN

ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳ ಸ್ಥಿರಾಸ್ತಿಗಳ ಸಮೀಕ್ಷೆ ನಡೆಸಿ, ಎಲ್ಲಾ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾರ ಹೇಳಿದರು.

ನಿನ್ನೆಯಷ್ಟೇ ರಾಮಲಿಂಗಾರೆಡ್ಡಿಯವರು ಮುಜರಾಯಿ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.ಸಭೆಯಲ್ಲಿ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ಸಚಿವರು ನೀಡಿದರು.

ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು, 65 ವರ್ಷ ಮೇಲ್ಪಟ್ಟ ಭಕ್ತರಿಗೆ ಹಾಗೂ ದೈಹಿಕ ವಿಕಲಚೇತನರಿಗೆ ತೊಂದರೆಯಿಲ್ಲದೆ ದರ್ಶನ ಪಡೆಯುವಂತೆ ಮಾಡಲು ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.

ಶಕ್ತಿ ಯೋಜನೆ ಆರಂಭವಾದ ಬಳಿಕ ದೇವಾಲಯಗಳಿಗೆ ಬರುವ ಭಕ್ತರ ಪ್ರಮಾಣ ಹೆಚ್ಚಿದೆ. ‘ಎ’ ಮತ್ತು ‘ಬಿ’ ದರ್ಜೆಯ ದೇವಸ್ಥಾನಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಬೇಕು. ತಾಯಂದಿರಿಗೆ ಶಿಶು ಆರೈಕೆ ಮಾಡಲು ಹಾಗೂ ಹಾಲು ಉಣಿಸಲು ಪ್ರತ್ಯೇಕ ‘ಅಮ್ಮ’ ಕೇಂದ್ರ ತೆರೆಯಬೇಕು. 65 ವರ್ಷ ದಾಟಿದ ಹಿರಿಯರಿಗೆ, ಅಂಗವಿಕಲರಿಗೆ ನೇರ ಮತ್ತು ಸರಾಗವಾಗಿ ದೇವರ ದರ್ಶನ ಪಡೆಯಲು ವ್ಯವಸ್ಥೆ ಮಾಡಬೇಕು. ಎಲ್ಲ ದೇವಸ್ಥಾನಗಳಲ್ಲಿ ಕುಡಿಯುವ ನೀರು, ಶೌಚಾಲಯ ಸಹಿತ ಮೂಲ ಸೌಲಭ್ಯಗಳಿರಬೇಕು. ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯಬೇಕು. ಆರಂಭಿಕ ಹಂತವಾಗಿ 25 ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲು ಮಾಸ್ಟರ್‌ಪ್ಲಾನ್‌ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೇವಾಲಯಗಳ ಸುತ್ತ 100 ಮೀಟರ್ ಸುತ್ತಳತೆಯಲ್ಲಿ ಮದ್ಯ, ಸಿಗರೇಟು, ಗುಟ್ಕಾ ಹಾಗೂ ಇತರೆ ಮಾದಕ ವಸ್ತುಗಳ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಿ ಆದೇಶ ಹೊರಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

SCROLL FOR NEXT