ನವದೆಹಲಿ: ತಮಿಳು ನಾಡಿಗೆ ಕಾವೇರಿ ನೀರು ಹರಿಸಿದರೆ ನಮ್ಮ ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು. ಕುಡಿಯುವ ನೀರು ಅತ್ಯಂತ ಅಗತ್ಯವಾಗಿರುತ್ತದೆ. ನಮಗೆ 106 ಟಿಎಂಸಿ ನೀರು ಬೇಕಾಗುತ್ತದೆ. ಆದರೆ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆ ಮಳೆಯಾಗದಿರುವುದರಿಂದ ನಮ್ಮ ಡ್ಯಾಂಗಳಲ್ಲಿ ನೀರು ಬಹಳ ಕಡಿಮೆಯಾಗಿದೆ. ಬರ ಪರಿಸ್ಥಿತಿ ಕೂಡ ಉಂಟಾಗಬಹುದು. ನಮ್ಮಲ್ಲಿ ಈಗ 52 ಟಿಎಂಸಿ ನೀರು ಇದೆ, ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಲಶಕ್ತಿ ಸಚಿವರ ಭೇಟಿ: ಇದಕ್ಕೂ ಮುನ್ನ ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಕಾವೇರಿ ಜಲ ವಿವಾದ ಸಂಬಂಧ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಅವರನ್ನು ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಗಜೇಂದ್ರ ಸಿಂಗ್ ಶೇಖಾವತ್ ನಿವಾಸದಲ್ಲಿ ಭೇಟಿಯಾಗಿ ನೀರು ಹಂಚಿಕೆ ವಿವಾದದ ಕುರಿತು ಮಾತುಕತೆ ನಡೆಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ: ಈ ಮಧ್ಯೆ ಕರ್ನಾಟಕ ಮತ್ತು ತಮಿಳು ನಾಡು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಈಗ ಆರಂಭಿಸಿದ್ದು, ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿ ಮುಕುಲ್ ರೋಹಟಗಿ ತಮಿಳು ನಾಡು ಪರ ವಾದ ಮಂಡಿಸುತ್ತಿದ್ದಾರೆ. ಕರ್ನಾಟಕ ಪರ ನ್ಯಾಯಮೂರ್ತಿ ಶ್ಯಾಮದಿವಾನ್ ವಾದ ಮಂಡಿಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಕರ್ನಾಟಕ ರಾಜ್ಯದ ಈ ವರ್ಷದ ಬರ ಪರಿಸ್ಥಿತಿಯನ್ನು ನೋಡಿಕೊಂಡು ತಮ್ಮ ಪರವಾಗಿ ತೀರ್ಪು ನೀಡುತ್ತದೆ ಎಂಬ ಆಶಾವಾದದಲ್ಲಿದ್ದೇವೆ ಎಂದರು.
ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, ಸಿಎಂ ನೇತೃತ್ವದಲ್ಲಿ ನಿನ್ನೆ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಇಡೀ ಕರ್ನಾಟಕ ರಾಜ್ಯ ಒಗ್ಗಟ್ಟಾಗಿ ನಿಂತಿದೆ, ರೈತರ ಹಿತ ಕಾಪಾಡಬೇಕು ಎಂದು ನಾವೆಲ್ಲರೂ ಒಗ್ಗೂಡಿದ್ದೇವೆ. ಇಲ್ಲಿ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಹುತೇಕ ಬೆಳೆಗಳನ್ನು ಕಳೆದುಕೊಂಡಿದ್ದೇವೆ ಮತ್ತು ಕುಡಿಯುವ ನೀರಿನ ನಿರ್ವಹಣೆಯೂ ಕಷ್ಟವಾಗುತ್ತಿದೆ ಎಂದು ಅವರಿಗೆ ಮನವರಿಕೆ ಮಾಡಿ ಮನವಿ ಮಾಡಿದ್ದೇವೆ, ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.