ರಾಜ್ಯ

ಹೈದರಾಬಾದ್‌-ಬೆಂಗಳೂರು ಮಧ್ಯೆ ವಂದೇ ಭಾರತ್‌ ರೈಲು ಸಂಚಾರ; ಸೆ.24ರಂದು ಮೋದಿ ಚಾಲನೆ

Manjula VN

ಬೆಂಗಳೂರು: ರಾಜ್ಯದ ಮೂರನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಮುಹೂರ್ತ ನಿಗದಿಯಾಗಿದೆ. ಸೆ.24ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೈದರಾಬಾದ್ -ಕಾಚಿಗುಡ -ಯಶವಂತಪುರ ನಡುವೆ ಸಂಚರಿಸುವ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.

ರೈಲಿನ ಮೊದಲ ಪ್ರಾಯೋಗಿಕ ಸಂಚಾರ ಇಂದು ನಡೆಯಲಿದೆ. ಹೈದರಾಬಾದ್ ಮತ್ತು ಬೆಂಗಳೂರು ದಕ್ಷಿಣ ಭಾರತದ ಐಟಿ ನಗರಗಳಾಗಿದ್ದು, ಇವುಗಳ ನಡುವೆ ಮೊದಲ ವಂದೇ ಭಾರತ್ ರೈಲು ಸಂಚರಿಸಲಿದೆ. ಗುರುವಾರ ಬೆಳಿಗ್ಗೆ ಕಾಚಿಗುಡದಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರ ರೈಲು ನಿಲ್ದಾಣ ತಲುಪುವ ಸಾಧ್ಯತೆ ಇದೆ. ಯಶವಂತಪುರದಿಂದ 2.45ಕ್ಕೆ ಹೊರಡಲಿದೆ.

ಸುಮಾರು 610 ಕಿ.ಮೀ. ಅಂತರವನ್ನು 7 ಗಂಟೆಯಲ್ಲಿ ತಲುಪಬಹುದಾಗಿದೆ. ಯಶವಂತಪುರದಿಂದ ಧರ್ಮಾವರಂ, ದೋನ್, ಕರ್ನೂಲ್ ನಗರ, ಗಡ್ವಾಲಾ ಜಂಕ್ಷನ್, ಮೆಹಬೂಬ್ ನಗರ, ಶಾದ್ ನಗರ್ ಮಾರ್ಗವಾಗಿ ವಂದೇ ಭಾರತ್ ರೈಲು ಸಂಚರಿಸಲಿದೆ.

ಈ ರೈಲು ಕರ್ನಾಟಕದಲ್ಲಿ ಕೇವಲ 80 ರಿಂದ 85 ಕಿಲೋಮೀಟರ್ ಸಂಚರಿಸುವುದರಿಂದ ರಾಜ್ಯದ ಜನತೆಗೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎಂದು ಹೇಳಲಾಗಿದೆ. ಮೈಸೂರು –ಚೆನ್ನೈ, ಬೆಂಗಳೂರು -ಧಾರವಾಡ ನಂತರ ರಾಜ್ಯದಲ್ಲಿ ಸಂಚರಿಸುವ ಮೂರನೇ ವಂದೇ ಭಾರತ್ ರೈಲು ಇದಾಗಿದೆ.

SCROLL FOR NEXT