ರಾಜ್ಯ

ಪರಿಣಾಮಕಾರಿ ವಾದ ಮಂಡಿಸುವಲ್ಲಿ ಸರ್ಕಾರ ವಿಫಲ, ಇಡೀ ರಾಜ್ಯ ಸಂಕಷ್ಟ ಅನುಭವಿಸುವಂತಾಗಿದೆ: ಸಂಸದೆ ಸುಮಲತಾ

Manjula VN

ಮೈಸೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಣಾಮಕಾರಿಯಾಗಿ ವಾದ ಮಂಡಿಸುವಲ್ಲಿ ವಿಫಲವಾದ ಪರಿಣಾಮ ಇಡೀ ರಾಜ್ಯ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅವರು ಗುರುವಾರ ಹೇಳಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ವಿವಾದದಲ್ಲಿ ಬರುವ ಫಲಿತಾಂಶ ಯಾವಾಗಲೂ ಕರ್ನಾಟಕಕ್ಕೆ ವಿರುದ್ಧವಾಗಿದೆ... ಅಂದರೆ ಅಧಿಕಾರಿಗಳು ಸರಿಯಾದ ವಾದ ಮಂಡಿಸಲು ಮತ್ತು ಸಮಿತಿಗೆ ವಾಸ್ತವತೆಯನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ. ಸರಿಯಾದ ಅಂಕಿಅಂಶಗಳನ್ನು ನೀಡದಿದ್ದರೆ ಮತ್ತು ವರದಿಗಳನ್ನು ಸಲ್ಲಿಸದಿದ್ದರೆ ಈ ರೀತಿ ಆಗುತ್ತದೆ ಎಂದು ಕಿಡಿಕಾರಿದ್ದಾರೆ.

“ಸುಪ್ರೀಂಕೋರ್ಟ್‌ನಿಂದ ನಮಗೆ ಸ್ವಲ್ಪ ಪರಿಹಾರ ಸಿಗುತ್ತದೆ ಎಂಬ ಭರವಸೆ ಇತ್ತು. ಆದರೆ ಅಲ್ಲಿಯೂ ನಮ್ಮ ಪರವಾಗಿ ತೀರ್ಪು ಬಂದಿಲ್ಲ. ನಾವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ ಮತ್ತು ಅದನ್ನು ಪಾಲಿಸುತ್ತೇವೆ. ನಾನು ಅದನ್ನು ರಾಜಕೀಯ ವಿಷಯವನ್ನಾಗಿ ಮಾಡುವುದಿಲ್ಲ... ಕೇಂದ್ರ ಸರ್ಕಾರವೂ ಮಧ್ಯಪ್ರವೇಶಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ ಎಂದು ಹೇಳಿದರು.

ಬಳಿಕ ವಿವಾದ ಸಂಬಂಧ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡುವುದಾಗಿ ಹಾಗೂ ವಾಸ್ತವತೆಯನ್ನು ಅರ್ಥ ಮಾಡಿಸಲು ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿ ವಾಸ್ಥವಿಕ ಪರಿಸ್ಥಿತಿಯನ್ನು ಅರ್ಥ ಮಾಡಿಸುವಂತೆಯೂ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

SCROLL FOR NEXT