ರಾಜ್ಯ

ಜನತಾ ದರ್ಶನ ಕಾರ್ಯಕ್ರಮದಲ್ಲಿ ಗದ್ದಲ: ಕೋಲಾರ ಎಸ್‌ಪಿ ವಿರುದ್ದ ಹಕ್ಕುಚ್ಯುತಿ ಮಂಡಿಸುತ್ತೇನೆ: ಸಂಸದ ಎಸ್ ಮುನಿಸ್ವಾಮಿ

Ramyashree GN

ಕೋಲಾರ: ಕೋಲಾರದಲ್ಲಿ ಮಂಗಳವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನನ್ನನ್ನು ಹೊರಗೆ ತಳ್ಳಿ ಶಿಷ್ಟಾಚಾರ ಉಲ್ಲಂಘಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಲೋಕಸಭೆ ಸ್ಪೀಕರ್‌ಗೆ ಅರ್ಜಿ ಸಲ್ಲಿಸುವುದಾಗಿ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ತಿಳಿಸಿದರು.

ಸಂಸದರಾಗಿರುವ ತಮಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡದಿರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಹೀಗಾಗಿ, ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡುವುದಾಗಿ ಮುನಿಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋಲಾರ ಎಸ್‌ಪಿ ನಾರಾಯಣ ಅವರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಶಾಸಕ ಎಸ್‌ಎನ್ ನಾರಾಯಣಸ್ವಾಮಿ ಅವರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದರೆ, ಅವರಿಗೆ ಏನೂ ಮಾಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಜೆಪಿ ಸಂಸದನಾದ ನನ್ನನ್ನು ಉದ್ದೇಶಪೂರ್ವಕವಾಗಿ ಬಲವಂತದಿಂದ ಹೊರಗೆ ಕಳುಹಿಸಿದ್ದಾರೆ. ಅವರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು. ದಲಿತ ಸಂಸದನಾಗಿರುವ ನನಗೆ ಅವಮಾನ ಮಾಡುವುದು ಕಾಂಗ್ರೆಸ್‌ನ ಉದ್ದೇಶವಾಗಿದೆ. ಶಾಸಕ ನಾರಾಯಣಸ್ವಾಮಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಮುನಿಸ್ವಾಮಿ ಹೇಳಿದರು.

ಶ್ರೀನಿವಾಸಪುರದಲ್ಲಿ ರೈತರ ಮೇಲೆ ದಾಖಲಿಸಿರುವ ಭೂ ಒತ್ತುವರಿ ಪ್ರಕರಣವನ್ನು ಹಿಂಪಡೆಯಬೇಕು ಮತ್ತು ನೈಜ ಭೂಗಳ್ಳರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ, ಶಾಸಕ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಡಿಸಿ ಶಂಕರ್ ವಣಿಕ್ಯಾಳ ಅವರಿಗೆ ದೂರು ಸಲ್ಲಿಸಿದರು.

SCROLL FOR NEXT