ಹೈಕೋರ್ಟ್‌
ಹೈಕೋರ್ಟ್‌ 
ರಾಜ್ಯ

ಸುದೀರ್ಘ ಸೇವೆ ಸಲ್ಲಿಸಿದವರಿಗೆ ಸಣ್ಣ ಮೊತ್ತ ನೀಡಿದರೆ ಆಕಾಶ ಕಳಚಿ ಬೀಳದು: ಹೈಕೋರ್ಟ್‌

Manjula VN

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದಲ್ಲಿ (ಕೆಪಿಟಿಸಿಎಲ್) ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ವೇತನ ಹಾಗೂ ಪಿಂಚಣಿ ಮರುನಿಗದಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದ ನಿವೃತ್ತ ಉದ್ಯೋಗಿಗಳಿಗೆ ಹೈಕೋರ್ಟ್ ನೆರವಿನ ಹಸ್ತ ಚಾಚಿದ್ದು, ಹಲವು ವರ್ಷಗಳ ಕಾಲ ನಿಗಮಕ್ಕಾಗಿ ದುಡಿದಿರುವವರಿಗೆ ಸಣ್ಣ ಮೊತ್ತವನ್ನು ನೀಡುವುದರಿಂದ ಆಕಾಶವೇನೂ ಕಳಚಿ ಬೀಳುವುದಿಲ್ಲ ಎಂದು ಖಡಕ್‌ ಆಗಿ ಹೇಳಿದೆ.

ಕೆಪಿಟಿಸಿಎಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ವಜಾಗೊಳಿಸಿದ್ದು, ನಿವೃತ್ತ ಉದ್ಯೋಗಿಗಳ ವೇತನ ಹಾಗೂ ಪಿಂಚಣಿ ಮರುನಿಗದಿ ಸಂಬಂಧ ಏಕಸದಸ್ಯಪೀಠ ನೀಡಿದ್ದ ಆದೇಶವನ್ನು ಎತ್ತಿಹಿಡಿದಿದೆ.

ತಮ್ಮ ಕೈಯಲ್ಲಿ ಬಲವಿದ್ದಾಗ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತರಾಗಿ ಇದೀಗ ಜೀವನದ ಸಂಧ್ಯಾಕಾಲದಲ್ಲಿರುವ ಪಿಂಚಣಿದಾರರನ್ನು ಅಂತಃಕರಣದಿಂದ ನೋಡಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

ನಿಗಮದ ಪರ ವಕೀಲರು, “ಸುಪ್ರೀಂ ಕೋರ್ಟ್ ಕೆಪಿಟಿಸಿಎಲ್ ವರ್ಸಸ್ ಸಿ ಪಿ ಮುಂದಿನಮನಿ ಪ್ರಕರಣದಲ್ಲಿ ಉದ್ಯೋಗಿಗಳಿಗೆ ಇಂತಹುದೇ ಪರಿಹಾರ ಒದಗಿಸಲಾಗಿದೆ. ಹೀಗಾಗಿ, ಈ ಮೊದಲು ನಿವೃತ್ತರಾದ ಉದ್ಯೋಗಿಗಳಿಗೆ ಆದೇ ರೀತಿಯಲ್ಲಿ ಪರಿಹಾರ ನೀಡಲಾಗದು” ಎಂದು ಪೀಠಕ್ಕೆ ವಿವರಿಸಿದ್ದರು.

ಕೆಪಿಟಿಸಿಎಲ್ ಮುಂದಿಟ್ಟಿದ್ದ ಎಲ್ಲ ವಾದಗಳನ್ನು ತಳ್ಳಿಹಾಕಿದ ನ್ಯಾಯಾಲಯವು ಏಕಸದಸ್ಯ ಪೀಠದ ಆದೇಶದಿಂದಾಗಿ ಉದ್ಯೋಗಿಗಳಿಗೆ ಸಣ್ಣ ಪ್ರಮಾಣದ ವೇತನ ಹೆಚ್ಚಳ ನೀಡಬೇಕಾಗುತ್ತದೆ. ಇದರಿಂದ ನಿಗಮದ ಬಜೆಟ್ ಮೇಲೆ ಅಂತಹ ಹೊರೆಯೇನು ಆಗುವುದಿಲ್ಲ. ಹಲವು ವರ್ಷಗಳ ಕಾಲ ನಿಗಮಕ್ಕಾಗಿ ದುಡಿದಿರುವವರಿಗೆ ಸಣ್ಣ ಮೊತ್ತವನ್ನು ನೀಡುವುದರಿಂದ ಆಕಾಶವೇನೂ ಕಳಚಿ ಬೀಳುವುದಿಲ್ಲ” ಎಂದು ಹೇಳಿದೆ.

ಉದ್ಯೋಗಿಗಳು ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರೂ ಸಹ ಅವರ ವರ್ಷವಾರು ಸೇವೆ ಪರಿಗಣಿಸಿ ವೇತನ ಬಡ್ತಿ ನೀಡಬೇಕಾಗುತ್ತದೆ. ಅದರ ಪಾವತಿಯಿಂದ ನಿಗಮ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದೆ.

ತುಮಕೂರಿನ ಎಲ್ ಮಲ್ಲಿಕಾರ್ಜುನಪ್ಪ ಸೇರಿದಂತೆ ಮೂವತ್ತಕ್ಕೂ ಅಧಿಕ ನಿವೃತ್ತ ಉದ್ಯೋಗಿಗಳು ಕೆಪಿಟಿಸಿಎಲ್ ತಮಗೆ ಸರಿಯಾಗಿ ವೇತನ ಹಾಗೂ ಪಿಂಚಣಿ ನಿಗದಿ ಮಾಡಿಲ್ಲ ಎಂದು ಏಕಸದಸ್ಯ ಪೀಠದ ಮೊರೆ ಹೋಗಿದ್ದರು. ಏಕಸದಸ್ಯ ಪೀಠ 2023ರ ಡಿಸೆಂಬರ್‌ 15ರಂದು ವಾರ್ಷಿಕ ಹೆಚ್ಚುವರಿ ವೇತನ ಹೆಚ್ಚಳ ಮಾಡುವ ಜೊತೆಗೆ ಅವರ ವೇತನ ಮರುನಿಗದಿಪಡಿಸಬೇಕು ಮತ್ತು ಆನಂತರ ಪಿಂಚಣಿಯನ್ನು ಮರುನಿಗದಿ ಮಾಡಿ ಬಾಕಿ ಸಹಿತ ಪಾವತಿಸಬೇಕು ಎಂದು ಆದೇಶ ನೀಡಿತ್ತು. ಆ ಆದೇಶ ಪ್ರಶ್ನಿಸಿ ಕೆಪಿಟಿಸಿಎಲ್ ಮೇಲ್ಮನವಿ ಸಲ್ಲಿಸಿತ್ತು.

SCROLL FOR NEXT