ಮಿರಾಕಲ್ ಡ್ರಿಂಕ್ಸ್ ಕಟ್ಟಡ
ಮಿರಾಕಲ್ ಡ್ರಿಂಕ್ಸ್ ಕಟ್ಟಡ  
ರಾಜ್ಯ

ಬೆಂಗಳೂರು: ಆರ್ ಟಿ ನಗರದ ಕಟ್ಟಡದಲ್ಲಿ ಅಗ್ನಿ ಅವಘಡ; 20 ಕ್ಕೂ ಹೆಚ್ಚು ಮಂದಿಯ ರಕ್ಷಣೆ

Sumana Upadhyaya

ಬೆಂಗಳೂರು: ಐಟಿ ಸಿಟಿ ಬೆಂಗಳೂರಿನ ಆರ್‌ಟಿ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡದ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕಟ್ಟಡ ವ್ಯಾಪಿಸಿದ್ದು, ಒಳಗಡೆ ಇದ್ದ 20 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬ್ಬಂದಿಗೆ ಯಾವುದೇ ಗಾಯ ಅಥವಾ ಪ್ರಾಣ ಹಾನಿ ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಧ್ಯಾಹ್ನ 1.50 ಕ್ಕೆ ಬೆಂಕಿ ಕಾಣಿಸಿಕೊಂಡ ಬಗ್ಗೆ ಕರೆ ಬಂದಿದ್ದು, ನಾಲ್ಕು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿ, ಸಂಜೆ 4 ಗಂಟೆಗೆ ಬೆಂಕಿಯನ್ನು ನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಪ್ರಕಾರ, ನೆಲಮಾಳಿಗೆಯಲ್ಲಿರುವ ಜನರೇಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಕಟ್ಟಡದ ನೆಲ ಮತ್ತು ಮೊದಲ ಮಹಡಿಯಲ್ಲಿ ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತದೆ, ಮೂರು ಮತ್ತು ನಾಲ್ಕನೇ ಮಹಡಿಗಳಲ್ಲಿ ಮಿರಾಕಲ್ ಡ್ರಿಂಕ್ಸ್ ಎಂಬ ಆಯುರ್ವೇದ ಆಸ್ಪತ್ರೆಯಿದೆ.

ನೆಲಮಾಳಿಗೆಯಲ್ಲಿ ಸಂಗ್ರಹಿಸಲಾಗಿದ್ದ ಆಯುರ್ವೇದ ಔಷಧಿಗಳ ದಾಸ್ತಾನು ಮತ್ತು ಅಲ್ಲಿ ನಿಲ್ಲಿಸಿದ್ದ ಸುಮಾರು 25 ವಾಹನಗಳಿಗೂ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಬೆಂಕಿಯ ಪರಿಣಾಮ ಕಟ್ಟಡದ ಮೇಲೆ ಹೊಗೆ ಆವರಿಸಿದ್ದು, ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದವರು ಟೆರೇಸ್‌ಗೆ ಧಾವಿಸಿದರು. ಬೆಂಕಿ ಹೊತ್ತಿಕೊಂಡ ಕೂಡಲೇ ಗಾಬರಿಗೊಂಡು ಟೆರೇಸ್‌ಗೆ ಧಾವಿಸಿದ 20ಕ್ಕೂ ಹೆಚ್ಚು ಜನರನ್ನು ರಕ್ಷಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ.

ನಮ್ಮ ತಂಡವೊಂದು ಬೆಂಕಿಯನ್ನು ನಂದಿಸುತ್ತಿದ್ದರೆ, ಇನ್ನೊಂದು ತಂಡ ಏಣಿಯ ಮೂಲಕ ಟೆರೇಸ್‌ನಿಂದ ಜನರನ್ನು ರಕ್ಷಿಸುವಲ್ಲಿ ನಿರತವಾಗಿತ್ತು ಎಂದು ಹಿರಿಯ ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನರೇಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

SCROLL FOR NEXT