ಸಂಗ್ರಹ ಚಿತ್ರ 
ರಾಜ್ಯ

ವೈದ್ಯಕೀಯ ವಿದ್ಯಾರ್ಥಿನಿಯರಲ್ಲಿ ಕಾಲರಾ ಪತ್ತೆ; ಮೋದಿ ಫೋಟೋ ಬಳಕೆ ವಿವಾದ; ಆನೇಕಲ್‌ನಲ್ಲಿ 120 ಅಡಿ ಉದ್ದದ ತೇರು ಪಲ್ಟಿ! - ಈ ದಿನದ ಸುದ್ದಿ ಮುಖ್ಯಾಂಶಗಳು: 06-04-2024

ವೈದ್ಯಕೀಯ ವಿದ್ಯಾರ್ಥಿನಿಯರಲ್ಲಿ ಕಾಲರಾ ಪತ್ತೆ

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಸಂಸ್ಥೆಯ ಮಹಿಳಾ ಹಾಸ್ಟೆಲ್ನ 47 ವಿದ್ಯಾರ್ಥಿನಿಯರು ಏಕಾಏಕಿ ಅಸ್ವಸ್ಥರಾಗಿದ್ದು, ನಿನ್ನೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಇಬ್ಬರು ವಿದ್ಯಾರ್ಥಿನಿಯರಲ್ಲಿ ಕಾಲರಾ ಅಂಶ ಪತ್ತೆಯಾಗಿದೆ. ವಿದ್ಯಾರ್ಥಿನಿಯರು ವಾಂತಿ-ಭೇದಿಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೇ ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿ, ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು, ಬಿಎಂಸಿಆರ್‌ಐ ಹಾಸ್ಟೆಲ್ ನಲ್ಲಿ ಕನಿಷ್ಠ ಸ್ವಚ್ಛತೆ ಇಲ್ಲದ ಬಗ್ಗೆ ಹಲವು ಬಾರಿ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಈ ಬಗ್ಗೆ ಒಂದು ವಾರದಲ್ಲಿ ವರದಿ ಕೊಡುವಂತೆ ಕೇಳಿದ್ದೇನೆ ಎಂದರು.

ಮೋದಿ ಫೋಟೋ ಬಳಕೆ ವಿವಾದ: ಕೋರ್ಟ್ ಮೆಟ್ಟಿಲೇರಿದ ಈಶ್ವರಪ್ಪ

ಬಿಎಸ್ ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿರುವ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ, ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಪಕ್ಷೇತರರಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಪ್ರಚಾರ ಶುರು ಮಾಡಿರುವ ಈಶ್ವರಪ್ಪ ಪ್ರಧಾನಿ ಮೋದಿಯವರ ಫೋಟೋ ಬಳಸುತ್ತಿರುವ ವಿಚಾರ ಇದೀಗ ವಿವಾದಕ್ಕೀಡಾಗಿದ್ದು, ಈಶ್ವರಪ್ಪ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈಶ್ವರಪ್ಪ ಪ್ರಚಾರದ ವೇಳೆ ಮೋದಿ ಭಾವಚಿತ್ರ ಬಳಸಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವ್ಯಂಗ್ಯವಾಡಿದ್ದರು. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಅವರಿಗೆ ತಿರುಗೇಟು ನೀಡಿದ್ದ ಈಶ್ವರಪ್ಪ, ಮೋದಿ ಅವರಪ್ಪನ ಆಸ್ತಿನಾ, ಮೋದಿ ಭಾವಚಿತ್ರವನ್ನು ಯಾರಾದರೂ ಬಳಸಬಹುದು ಎಂದು ಹೇಳಿದ್ದರು. ಅಲ್ಲದೆ, ಮೋದಿ ಫೋಟೋ ಬಳಕೆಗಾಗಿ ಕೋರ್ಟ್ ಮೊರೆಹೋಗಿದ್ದು ಕೆವಿಯಟ್‌ ಅರ್ಜಿ ಸಲ್ಲಿಸಿದ್ದಾರೆ.

ಹನುಮಾನ್‌ ಚಾಲೀಸಾ ಪ್ರಕರಣ: ಸಂತ್ರಸ್ತ ಮುಖೇಶ್ ವಿರುದ್ಧ ಎಫ್ಐಆರ್

ಬೆಂಗಳೂರಿನ ನಗರ್ತಪೇಟೆಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಹನುಮಾನ್‌ ಚಾಲೀಸಾ ಪ್ರಕರಣದಲ್ಲಿ ಈಗ ಹೊಸ ತಿರುವು ಸಿಕ್ಕಿದೆ. ಅನ್ಯಕೋಮಿನ ಯುವಕರಿಂದ ಹಲ್ಲೆಗೊಳಗಾದ ಅಂಗಡಿ ಮಾಲೀಕ ಮುಖೇಶ್ ವಿರುದ್ಧವೂ ಈಗ ಎಫ್ಐಆರ್ ದಾಖಲಾಗಿದೆ. ಘಟನೆ ಸಂಬಂಧ ಅಂದು ಸುಲೈಮನ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ರಂಜಾನ್ ಇದ್ದರೂ ಭಕ್ತಿ ಗೀತೆ ಹಾಕಿ ಮುಖೇಶ್ ಕಿರಿಕ್ ಮಾಡುತ್ತಿದ್ದ ಎಂದು ಸುಲೈಮನ್ ತಂದೆ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಕೋರ್ಟ್ ನಿರ್ದೇಶನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ವಿರುದ್ದದ ಕ್ರಿಮಿನಲ್ ಪ್ರಕರಣ ರದ್ದು

ಕಳೆದ ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ಅಕ್ರಮ ನಡೆಸಿದ ಆರೋಪದಡಿ ನಿಪ್ಪಾಣಿ ಶಾಸಕಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ವಿರುದ್ದ ದಾಖಲಿಸಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಪ್ರಕರಣ ರದ್ದು ಕೋರಿ ಶಶಿಕಲಾ ಜೊಲ್ಲೆ ಸಲ್ಲಿಸಿದ್ದ ಅರ್ಜಿಯನ್ನು, ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ವಿಚಾರಣೆ ನಡೆಸಿದರು. ಇದೊಂದು ರಾಜಕೀಯ ದುರುದ್ದೇಶದಿಂದ ಕೂಡಿದ ಪ್ರಕರಣ. ಅರ್ಜಿದಾರರ ಏಜೆಂಟ್‌ ಜೇಬಿನಲ್ಲಿ 10 ಸಾವಿರ ನಗದು ಇತ್ತು ಎಂಬ ಕಾರಣಕ್ಕೆ ಈ ಪ್ರಕರಣ ದಾಖಲಿಸಲಾಗಿತ್ತು. ಇದು ಲಂಚದ ಹಣ ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಜೊಲ್ಲೆ ಪರ ವಕೀಲರು ವಾದಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಪ್ರಕರಣ ರದ್ದುಪಡಿಸಿತು.

ಮದ್ದೂರಮ್ಮ ಜಾತ್ರೆಯಲ್ಲಿ 120 ಅಡಿ ಉದ್ದದ ತೇರು ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿದೆ

ಆನೇಕಲ್ ನ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ 120 ಅಡಿ ಉದ್ದದ ತೇರು ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿ ಬಿದ್ದಿದೆ. ಮದ್ದೂರಮ್ಮನ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮದ್ದೂರಮ್ಮನ ಜಾತ್ರೆ ನಡೆಯುತ್ತದೆ. ಆನೇಕಲ್ ತಾಲೂಕಿನ ಹೀಲಲಿಗೆಯಿಂದ ಹುಸ್ಕೂರಿಗೆ ಸುಮಾರು 70 ಎತ್ತುಗಳು ಹಾಗೂ ಟ್ರ್ಯಾಕ್ಟರ್ ಮೂಲಕ ತೇರನ್ನು ಎಳೆದುಕೊಂಡು ಹೋಗಲಾಗುತ್ತಿತ್ತು. ಆದರೆ, ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿನಲ್ಲಿ ಈ ತೇರು ಉರುಳಿ ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆ ಇದೇ ಮೊದಲಲ್ಲ, 2018ರಲ್ಲಿಯೂ ಮದ್ದೂರಮ್ಮ ಜಾತ್ರೆಯಲ್ಲಿ ತೇರು ಕುಸಿದು ಬಿದ್ದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BBMPಯಲ್ಲಿ ಭ್ರಷ್ಟಾಚಾರ: ನಾಗಮೋಹನ ದಾಸ್ ಆಯೋಗದಿಂದ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

ಛಲ ಬಿಡದ ಪ್ರಯತ್ನಕ್ಕೆ ಫಲ: 216 ಗಂಟೆ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆ ಬರೆದ ಉಡುಪಿಯ ದೀಕ್ಷಾ!

ಕ್ವಾಡ್ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುವ ಯೋಜನೆ ಕೈ ಬಿಟ್ಟ ಟ್ರಂಪ್‌; ನ್ಯೂಯಾರ್ಕ್ ಟೈಮ್ಸ್ ವರದಿ

ಬಿಹಾರದಲ್ಲಿ ಆರಂಭವಾದ 'Voter Adhikar Yatra' ದೇಶಾದ್ಯಂತ ವಿಸ್ತರಿಸಲಿದೆ: ರಾಹುಲ್ ಗಾಂಧಿ

ರಾಜ್ಯದ ಜನತೆಗ ಮತ್ತೊಂದು ಶಾಕ್: ಆಸ್ತಿ ನೋಂದಣಿ ಶುಲ್ಕ ಹೆಚ್ಚಳ; ನಾಳೆಯಿಂದಲೇ ಜಾರಿ

SCROLL FOR NEXT