ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ನೀರು ನಿರ್ವಹಣೆಗಾಗಿ ಜಲಮಂಡಳಿಯಿಂದ ‘RRR’ ಜನಾಂದೋಲನ

Shilpa D

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಜಲಮೂಲಗಳ ಪುನಶ್ಚೇತನಕ್ಕೆ ‘RRR’ ಜನಾಂದೋಲನ ನಡೆಸಲು ಜಲಮಂಡಳಿ ಸಜ್ಜಾಗಿದ್ದು, ನಾಗರಿಕರು ಕೈಜೋಡಿಸಬೇಕು ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾತ್‌ ಮನೋಹರ್‌ ಮನವಿ ಮಾಡಿದ್ದಾರೆ.

ನಗರದಲ್ಲಿರುವ ಅರ್ಕಾವತಿ ನದಿ ಮತ್ತು ವೃಷಭಾವತಿ ನದಿ ಪಾತ್ರದ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಆರ್‌ ಆರ್ ಆರ್’ ಎಂದರೆ, ‘ರಿವೈವಲ್‌ ಆಫ್‌ ಅರ್ಕಾವತಿ ಮತ್ತು ವೃಷಭಾವತಿ (ಅರ್ಕಾವತಿ ಮತ್ತು ವೃಷಭಾವತಿ ಪುನಶ್ಚೇತನ), ರಿಚಾರ್ಜಿಂಗ್‌ ಆಫ್‌ ರೈನ್‌ ವಾಟರ್‌ (ಮಳೆನೀರು ಮರುಪೂರಣ) ಮತ್ತು ರೆಜ್ಯೂವಿನೇಷನ್‌ ಆಫ್‌ 185 ಲೇಕ್ಸ್‌ (185 ಕೆರೆಗಳ ಪುನರುಜ್ಜೀವನ) ಎಂದು ಅವರು ವಿವರಿಸಿದ್ದಾರೆ.

ಅರ್ಕಾವತಿ ನದಿ ಮತ್ತು ವೃಷಭಾವತಿ ನದಿಗಳ ಪಾತ್ರದಲ್ಲಿ ಬಹಳಷ್ಟು ಒತ್ತುವರಿಯಾಗಿದ್ದು, ನೀರಿನ ಸಮರ್ಪಕ ಹರಿವಿಗೆ ತೊಂದರೆಯಾಗಿದೆ. ಈ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಾಗರಿಕರ ಪಾತ್ರವೂ ಬಹಳ ಮುಖ್ಯವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪುನರುಜ್ಜೀವನ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು. ನಗರದಲ್ಲಿರುವಂತಹ ಕೆರೆಗಳನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. 15ಕ್ಕೂ ಹೆಚ್ಚು ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರದ ವ್ಯಾಪ್ತಿಯಲ್ಲಿರುವಂತಹ 185 ಕೆರೆಗಳನ್ನೂ ಪುನಃಶ್ಚೇತನಗೊಳಿಸುವುದು ಜಲಮಂಡಳಿಯ ಗುರಿಯಾಗಿದೆ. ಅವುಗಳಲ್ಲಿನ ಹೂಳು ತೆಗೆಯುವುದು, ಗುಣಮಟ್ಟದ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಮಳೆ ನೀರು ಸಂಗ್ರಹ ಹಾಗೂ ಅದರ ಮರುಪೂರಣವನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಬಹುಪಾಲು ಜನರು ತಮ್ಮ ಕಟ್ಟಡಗಳಲ್ಲಿ ಮಳೆನೀರನ್ನು ಸಂಗ್ರಹಿಸುವ ವ್ಯವಸ್ಥೆ ಹೊಂದಿದ್ದರೂ ಅದನ್ನು ಮರುಪೂರಣ ಮಾಡುವ ವ್ಯವಸ್ಥೆ ಕಲ್ಪಿಸಿರುವುದಿಲ್ಲ. ಇಂತಹ ವ್ಯವಸ್ಥೆ ಇಲ್ಲದ ಜನರಿಗೆ ಜಲಮಂಡಳಿ ಪ್ರೋತ್ಸಾಹ ನೀಡಲಿದೆ. ಇದಕ್ಕಾಗಿ ‘ಹೆಮ್ಮೆಯ ಬೆಂಗಳೂರು ನಾಗರಿಕ’ ಅಭಿಯಾನ ನಡೆಸಲಾಗುವುದು ಎಂದು ಮನೋಹರ್‌ ಹೇಳಿದರು. ಈ ಅಭಿಯಾನದ ಮೂಲಕ ಸಮರ್ಪಕವಾಗಿ ಮಳೆ ನೀರು ಮರುಪೂರಣ ವ್ಯವಸ್ಥೆ ಅಳವಡಿಸಿಕೊಂಡಿರುವ ಕಟ್ಟಡಗಳ ಮೇಲೆ ಜಲಮಂಡಳಿಯ ವತಿಯಿಂದ ‘ನಮ್ಮ ಹೆಮ್ಮೆಯ ಬೆಂಗಳೂರು ನಾಗರಿಕ’ ಎಂಬ ಭಿತ್ತಿಪತ್ರ ಅಂಟಿಸಲಾಗುವುದು. ನೀರಿನ ಬಿಲ್‌ನಲ್ಲೂ ಇದನ್ನು ನಮೂದಿಸಲಾಗುವುದು ಎಂದು ತಿಳಿಸಿದರು.

ಮೇ ತಿಂಗಳಲ್ಲಿ ನೀರಿನ ಕೊರತೆ ಭೀಕರವಾಗುವ ಸಾಧ್ಯತೆಯಿದ್ದು, BWSSB ನೀರಿನ ಕೊರತೆಯನ್ನು ಎದುರಿಸಲು ಸಜ್ಜಾಗಿದೆ. ವಿವಿಧ ಕೆರೆಗಳು ಮತ್ತು ನೀರು ಸರಬರಾಜು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ಮನೋಹರ್, ವಿವಿಧ ಕೆರೆಗಳಿಂದ ನೀರು ಪೂರೈಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸ್ತುತ ಕೆರೆಯಲ್ಲಿ 0.3 ಟಿಎಂಸಿ ಅಡಿ ನೀರು ಲಭ್ಯವಿದೆ. ಅಲ್ಲದೆ ಈ ಭಾಗದ ಕೊಳವೆಬಾವಿಗಳಲ್ಲಿ ಉತ್ತಮ ನೀರಿದೆ. ಮೇ ತಿಂಗಳಿನಲ್ಲಿ ನೀರಿನ ಕೊರತೆಯಾದರೆ ಬಿಡಬ್ಲ್ಯುಎಸ್‌ಎಸ್‌ಬಿಯ ಹೆಸರುಘಟ್ಟ ನೀರು ಸರಬರಾಜು ಕೇಂದ್ರದ ಮೂಲಕ ನಗರಕ್ಕೆ ಪ್ರತಿದಿನ 10 ಎಂಎಲ್‌ಡಿ ನೀರು ಪೂರೈಸಬಹುದು. ಬುಧವಾರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ’ ಎಂದು ಮನೋಹರ್ ತಿಳಿಸಿದರು.

SCROLL FOR NEXT