ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

'VFH' ಮತದಾರರ ಮೇಲೆ ಬಿಜೆಪಿ ಪ್ರಭಾವ ಆರೋಪ: ಗೌಪ್ಯತೆ ಉಲ್ಲಂಘನೆಯಾಗಿಲ್ಲ ಎಂದ ಚುನಾವಣಾ ಆಯೋಗ

Manjula VN

ಬೆಂಗಳೂರು: ಹಿರಿಯ ನಾಗರೀಕರಿಗೆ ಹಾಗೂ ವಿಶೇಷ ಚೇತನ ವ್ಯಕ್ತಿಗಳಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕೊಡಲಾಗಿದ್ದು, ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಜೊತೆಗೆ ಬಿಜೆಪಿ ಪಕ್ಷದ ಏಜೆಂಟರು ತೆರಳಿದ್ದಾರೆಂಬ ಕಾಂಗ್ರೆಸ್ ಆರೋಪವನ್ನು ಚುನಾವಣಾ ಆಯೋಗ ನಿರಾಕರಿಸಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಹಿರಿಯ ನಾಗರೀಕರಿಗೆ ಹಾಗೂ ವಿಶೇಷ ಚೇತನರಿಗೆ ಚುನಾವಣಾಧಿಕಾರಿಗಳು ಮತದಾನ ಮಾಡಲು ಅವಕಾಶ ಕಲ್ಪಿಸಿದ್ದರು. ಮತದಾನದ ವೇಳೆ ಯಾವುದೇ ಪಕ್ಷದ ಕಾರ್ಯಕರ್ತರಿಗೆ ಮನೆಯ ಒಳಗಡೆ ಹೋಗಲು ಅವಕಾಶ ಇರುವುದಿಲ್ಲ. ಹಾಗಿದ್ದರೂ ಬಿಜೆಪಿ ಪಕ್ಷದ ಏಜೆಂಟ್‌ ಗಳು ಅಧಿಕಾರಿಗಳ ಜೊತೆಗೆ ತಾವೂ ಮನೆಗಳಿಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ರಾಜಾಜಿನಗರದಲ್ಲಿ ಶನಿವಾರ ಚುನಾವಣಾಧಿಕಾರಿಗಳು ಮನೆ ಮನೆಗೆ ಮತದಾನಕ್ಕಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರೊಬ್ಬರು ಅವರ ಜೊತೆಗೆ ತೆರಳಿದ್ದರು ಎಂದು ಆರೋಪಿಸಿದೆ.

ಈ ಸಂಬಂಧ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಧಿಕಾರಿಗಳ ಜೊತೆಗೆ ಬಿಜೆಪಿ ಪಕ್ಷದ ಕಾರ್ಯಕರ್ತರಿಬ್ಬರೂ ಮ್ರೈಕ್ರೋ ಅಬ್ಸವರ್‌ ಮೂಕಪ್ರೇಕ್ಷಕರಾಗಿ ನಿಂತಿದ್ದಾರೆ. ಈ ನಿಟ್ಟಿನಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಆರೋಪ ಸಂಬಂಧ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮನೋಜ್ ಕುಮಾರ್ ಮೀನಾ ಅವರು, ಹಿರಿಯ ನಾಗರಿಕರ ಮತದಾನದ ವೇಳೆ ಗೌಪ್ಯತೆ ಮತ್ತು ಮತದಾರರಿಗೆ ಪ್ರಭಾವ ಬೀರುವ ಯಾವುದೇ ಚಟುವಟಿಕೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ತುರ್ತಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಗರ ಜಿಲ್ಲಾ ಚುನಾವಣಾಧಿಕಾರಿಗೆ ಸೂಚನೆ ನೀಡಲಾಗಿತ್ತು. ಇದನ್ನಾಧರಿಸಿ ಪರಿಶೀಲನೆ ನಡೆಸಿರುವ ಜಿಲ್ಲಾ ಚುನಾವಣಾಧಿಕಾರಿಗಳು ವರದಿಯನ್ನು ಸಲ್ಲಿಸಿದ್ದರು. ಇದರಲ್ಲಿ ವಿಡಿಯೋ ಚಿತ್ರಿಕರಣ, ಛಾಯಾಚಿತ್ರಗಳ ಪರಿಶೀಲನೆ ಹಾಗೂ ಮೈಕ್ರೋ ಅಬ್ಸರ್ವರ್ ವರದಿಯ ಆಧರಿಸಿ ಮತದಾನದ ಗೌಪ್ಯತೆ ಉಲ್ಲಂಘನೆ ಆಗಿಲ್ಲ.

ಒಂದು ಮನೆಯಿಂದ ಇನ್ನೊಂದು ಮನೆಗೆ ಮತದಾನದ ಪ್ರಕ್ರಿಯೆ ಮಾಡುವಾಗ ಪಿಆರ್‌ಒ ಚುನಾವಣಾ ಗುರುತಿನ ಚೀಟಿ ಕಳೆದುಹೋಗಿದ್ದು, ಇನ್ನುಳಿದ ಪೋಲಿಂಗ್ ಅಧಿಕಾರಿಗಳು ಗುರುತಿನ ಚೀಟಿಯನ್ನು ಧರಿಸಿಕೊಂಡು ಕರ್ತವ್ಯ ನಿರ್ವಹಿಸಿದ್ದಾರೆ. ಪಿಆರ್‌ಒಗೆ ತಕ್ಷಣ ಮತ್ತೊಂದು ಚುನಾವಣಾ ಗುರುತಿನ ಚೀಟಿಯನ್ನು ವಿತರಿಸಲಾಗಿದೆ. ಅಂದು ನಡೆದ ಮತದಾನದ ಸಂದರ್ಭದಲ್ಲಿ ಚುನಾವಣಾ ಕರ್ತವ್ಯಗಳನ್ನು ನಿಯಮಾನುಸಾರ ನಿರ್ವಹಿಸಿ, ಯಾವುದೇ ರೀತಿಯ ಮತದಾನ ಗೌಪ್ಯತೆಯನ್ನು ಉಲ್ಲಂಘನೆ ಮಾಡಿಲ್ಲ. ಯಾವುದೇ ಪಕ್ಷದ ಚುನಾವಣೆ ಅಭ್ಯರ್ಥಿಗಳ ಏಜೆಂಟರ್‌ಗಳ ಜೊತೆಗೂಡಿ ಮತದಾರರಿಗೆ ಪ್ರಭಾವ ಬೀರುವಂತಹ ಪ್ರಕ್ರಿಯೆಗಳು ನಡೆಯದೇ ಇರುವುದನ್ನ ವಿಡಿಯೋ ತುಣುಕುಗಳಿಂದ ಖಚಿತಪಡಿಸಿಕೊಳ್ಳಲಾಗಿದೆ ಎಂದರು.

ಈ ಹಿನ್ನಲೆಯಲ್ಲಿ ದೂರುದಾರರು ಹೇಳಿರುವಂತೆ ಯಾವುದೇ ಮತದಾನದ ಅಧಿಕಾರಿ/ನೌಕರರು ಹಾಗೂ ಕಂದಾಯ ನಿರೀಕ್ಷಕರು ಹಾಗೂ ಮೈಕ್ರೋ ಅಬ್ಸರ್‌ವರ್ ವಿರುದ್ದ ಕ್ರಮ ತಗೆದುಕೊಳ್ಳುವ ಅಂಶ ಕಂಡು ಬರದೇ ಇರುವುದರಿಂದ ದೂರುದಾರರ ದೂರ ಅರ್ಜಿಯನ್ನು ಮುಕ್ತಾಯಗೊಳಿಸಿದೆ ಎಂದು ತಿಳಿಸಿದರು.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಚುನಾವಣಾಧಿಕಾರಿಯೊಬ್ಬರು. ಜನರಿಗೆ ವಿಎಫ್‌ಎಚ್‌ನ ಮುಂಗಡ ಸೂಚನೆ ನೀಡಿದಂತೆಯೇ, ರಾಜಕೀಯ ಪಕ್ಷಗಳಿಗೂ ಮಾಹಿತಿ ನೀಡಲಾಗಿದೆ. ಯಾವುದೇ ರಾಜಕೀಯ ಪಕ್ಷಗಳು ಪ್ರತಿನಿಧಿಗಳನ್ನು ನೇಮಿಸಿಲ್ಲ. ವಿಡಿಯೋವನ್ನು ಸಿಇಒ ಕಚೇರಿಗೆ ನೀಡಲಾಗಿದೆ. ಚುನಾವಣಾಧಿಕಾರಿಗಳು ಮನೆಯ ಒಳಗೆ ಮತ್ತು ಹೊರಗೆ ನಡೆದಿದ್ದನ್ನೆಲ್ಲ ವಿಡಿಯೋ ಮಾಡಿದ್ದಾರೆ. ಹೊರಗೆ ಶಬ್ದ ಮತ್ತು ಅವ್ಯವಸ್ಥೆ ಇತ್ತು ಎಂಂಬುದುನ್ನು ನಾವೂ ಒಪ್ಪುತ್ತೇವೆ, ಆದರೆ, ಪರಿಸ್ಥಿತಿ ನಿಭಾಯಿಸುವುದು ನಮ್ಮ ಕೈಯಲ್ಲಿ ಇಲ್ಲ. ಮತದಾನದ ವಿಧಾನದ ಬಗ್ಗೆ ನಮಗೆ ಕಾಳಜಿ ಇತ್ತು. ಸ್ಥಳದಲ್ಲಿದ್ದ ಪ್ರತಿಯೊಂದನ್ನೂ ವಿಡಿಯೋ ಮಾಡಲಾಗಿದೆ. ಈ ವೇಳೆ ಸಂಪೂರ್ಣ ಗೌಪ್ಯತೆಯಿತ್ತು ಎಂದು ಹೇಳಿದ್ದಾರೆ.

ರಾಜಕೀಯ ಪಕ್ಷಗಳ ಕಾರ್ಯಕರ್ತರು ನೀಡುವ ಕಿರುಕುಳದ ಬಗ್ಗೆ ಜನರು ದೂರು ಸಲ್ಲಿಸಬಹುದು. ಸ್ಥಳದಲ್ಲಿ ಕೆಲವರು ನಮ್ಮ ಗುರುತಿನ ಚೀಟಿಗಳನ್ನು ತೋರಿಸುವಂತೆ ಕೇಳುತ್ತಿದ್ದರು. ಸರ್ಕಾರಿ ಕರ್ತವ್ಯದಲ್ಲಿದ್ದಾಗ ನಮ್ಮೊಂದಿಗೆ ಕೆಟ್ಟದಾಗಿ ನಡೆಸಿಕೊಂಡರು. ಮನೆ ಮನೆ ಭೇಟಿ ನೀಡುತ್ತಿದ್ದ ಹಿನ್ನೆಲಯಲ್ಲಿ ಸಿಬ್ಬಂದಿಯೊಬ್ಬರ ಗುರುತಿನ ಚೀಟಿ ಹಾಳಾಗಿತ್ತು. ಈ ವೇಳೆ ಸಿಬ್ಬಂದಿಯನ್ನು ಕಾರುಗಳವರೆಗೆ ಹಿಂಬಾಲಿಸಿ, ಕೆಟ್ಟದಾಗಿ ನಡೆಸಿಕೊಂಡರು. ಘಟನಾ ಸ್ಥಳದಲ್ಲಿ ಮಾಜಿ ಮೇಯರ್ ಕೂಡ ಇದ್ದರು ಎಂದು ತಿಳಿಸಿದ್ದಾರೆ

SCROLL FOR NEXT