ಪ್ರಾತನಿಧಿಕ ಚಿತ್ರ
ಪ್ರಾತನಿಧಿಕ ಚಿತ್ರ 
ರಾಜ್ಯ

ಬೆಂಗಳೂರು: ಓವರ್ ಹೆಡ್ ಟ್ಯಾಂಕ್ ನೀರಿಗೆ ವಿಷ ಬೆರೆಸಿ ಮಹಿಳೆ, ಮಗನ ಹತ್ಯೆಗೆ ಯತ್ನ; ದೂರು ದಾಖಲು

Ramyashree GN

ಬೆಂಗಳೂರು: 52 ವರ್ಷದ ಮಹಿಳೆಯೊಬ್ಬರು ತಮ್ಮ ಓವರ್‌ಹೆಡ್ ಟ್ಯಾಂಕ್‌ ನೀರಿನಲ್ಲಿ ವಿಷ ಬೆರೆಸಿರುವುದರ ಕುರಿತು ದೂರು ದಾಖಲಿಸಿದ್ದಾರೆ. ಅಗ್ರಹಾರ ಲೇಔಟ್‌ನ 1ನೇ ಮುಖ್ಯರಸ್ತೆ ನಿವಾಸಿ ರಾಜಮ್ಮ ಅವರು ಅಡುಗೆ ಮಾಡುತ್ತಿದ್ದಾಗ ನೀರಿನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ.

ಈ ವೇಳೆ ಟ್ಯಾಂಕ್‌ನೊಳಗೆ ಏನಾದರೂ ಬಿದ್ದಿದೆಯೇ ಎಂದು ಪರೀಕ್ಷಿಸಲು ಮಗನನ್ನು ಕಳುಹಿಸಿದ್ದಾರೆ. ಆಕೆಯ ಮಗ ಚಂದ್ರಶೇಖರ್ ಟ್ಯಾಂಕ್ ಪರಿಶೀಲಿಸಿದಾಗ ಪ್ಯಾಕೆಟ್ ಪತ್ತೆಯಾಗಿದೆ. ವಿಷ ಎಂದು ಶಂಕಿಸಿ ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಹೊಯ್ಸಳ ಗಸ್ತು ತಂಡ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದಾರೆ.

ಗುರುವಾರ ಬೆಳಗ್ಗೆ 10.30ರಿಂದ 11ರ ನಡುವೆ ಘಟನೆ ಬೆಳಕಿಗೆ ಬಂದಿದ್ದು, ಶನಿವಾರ ರಾಜಮ್ಮ ದೂರು ನೀಡಿದ್ದಾರೆ.

'ರಾಜಮ್ಮ ಅವರು ವಾಸವಾಗಿರುವ ಮನೆಯ ವಿಚಾರವಾಗಿ ತಮ್ಮ ಸಹೋದರ ಮಂಜುನಾಥ್ ಅವರೊಂದಿಗೆ ವಿವಾದವಿತ್ತು. ಸಿವಿಕ್ ನ್ಯಾಯಾಲಯದ ಆದೇಶವು ರಾಜಮ್ಮ ಅವರ ಪರವಾಗಿ ಬಂದಿದೆ ಎಂದು ಹೇಳಲಾಗಿದ್ದು, ಮಂಜುನಾಥ್ ಮತ್ತೆ ಪ್ರಕರಣ ದಾಖಲಿಸಿದ್ದರು. ಆದರೆ, ಪ್ರಕರಣವನ್ನು ತಳ್ಳಿಹಾಕಲಾಯಿತು.

ಇದರಿಂದ ಕುಪಿತಗೊಂಡ ಮಂಜುನಾಥ್ ಮತ್ತು ಅವರ ಪುತ್ರ ಕುಶಾಲ್ ಕುಮಾರ್ ಅವರು ರಾಜಮ್ಮ ಅವರಿಗೆ ತಕ್ಕ ಪಾಠ ಕಲಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ತಾನು ಮತ್ತು ತನ್ನ ಮಗ ಮನೆಯಲ್ಲಿಲ್ಲದಿದ್ದಾಗ ಮಂಜುನಾಥ್ ತಮ್ಮ ಟೆರೇಸ್ ಮೇಲೆ ಹೋಗುವುದನ್ನು ನೆರೆಹೊರೆಯವರು ನೋಡಿದ್ದಾರೆ ಎಂದು ರಾಜಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.ದೂರುದಾರರ ಪ್ರಕಾರ, ರಾಜಮ್ಮ ಮತ್ತು ಅವರ ಮಗನನ್ನು ಕೊಂದು ಮನೆ ಖಾಲಿ ಮಾಡುವ ಸಲುವಾಗಿ ಮಂಜುನಾಥ್ ಮತ್ತು ಅವರ ಮಗ ಓವರ್‌ಹೆಡ್ ಟ್ಯಾಂಕ್‌ಗೆ ವಿಷ ಬೆರೆಸಿದ್ದಾರೆ ಎನ್ನಲಾಗಿದೆ.

'ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಇನ್ನೂ ಯಾರನ್ನೂ ಬಂಧಿಸಿಲ್ಲ. ದೂರು ದಾಖಲಾದ ನಂತರ, ನೀರಿನಲ್ಲಿ ಹುಳುಗಳು ಮತ್ತು ಕ್ರಿಮಿ ಕೀಟಗಳು ಕಂಡುಬಂದ ಹಿನ್ನೆಲೆಯಲ್ಲಿ ಓವರ್‌ಹೆಡ್ ಟ್ಯಾಂಕ್‌ಗೆ ಪೌಡರ್ ಹಾಕಿರುವುದಾಗಿ ರಾಜಮ್ಮ ಅವರ ತಾಯಿ ಹೇಳಿಕೊಳ್ಳುತ್ತಿದ್ದಾರೆ. ಈ ಹೇಳಿಕೆಯು ತನಿಖೆಯನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವಾಗಿರಬಹುದು' ಎಂದು ಅಧಿಕಾರಿ ತಿಳಿಸಿದ್ದಾರೆ.

ಸಂಪಿಗೆಹಳ್ಳಿ ಪೊಲೀಸರು ಮಂಜುನಾಥ್ ಮತ್ತು ಅವರ ಪುತ್ರನ ವಿರುದ್ಧ ಐಪಿಸಿ 328, 504 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ ತನಿಖೆ ಕೈಗೊಳ್ಳಲಾಗಿದೆ.

SCROLL FOR NEXT