ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ 
ರಾಜ್ಯ

ಚುನಾವಣಾ ತಕಾರರು ಅರ್ಜಿ ಸಂಪೂರ್ಣ ನಕಲು: ಹೈಕೋರ್ಟ್‌ಗೆ ಸಿಎಂ ಸಿದ್ದರಾಮಯ್ಯ

Manjula VN

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಯ್ಕೆ ಅಸಿಂಧು ಕೋರಿ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ಸಂಪೂರ್ಣವಾಗಿ ನಕಲು ಮಾಡಿ ಹಾಕಲಾಗಿದೆ ಎಂದು ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ಗುರುವಾರ ತಿಳಿಸಿದರು.

ಮೈಸೂರು ಜಿಲ್ಲೆಯ ಕೂಡನಹಳ್ಳಿ ಗ್ರಾಮದ ಕೆ ಶಂಕರ್​ ಸಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸುನಿಲ್‌ ದತ್​ ಯಾದವ್​ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಸಿದ್ದರಾಮಯ್ಯ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್​ ಅವರು ಸಿದ್ದರಾಮಯ್ಯ ಆಯ್ಕೆ ಅಸಿಂಧು ಕೋರಿ ಸಲ್ಲಿಸಿರುವ ಇಡೀ ಅರ್ಜಿಯನ್ನು ಪರಿಶೀಲಿಸಲಾಗಿದೆ. ಇಡೀ ಅರ್ಜಿಯನ್ನು ರಿಜ್ವಾನ್​ ಅರ್ಷದ್​, ಪ್ರಿಯಾಂಕ್‌ ಖರ್ಗೆ ಅಸಿಂಧು ಕೋರಿರುವ ಅರ್ಜಿಗಳಿಂದ ಸಂಪೂರ್ಣ ನಕಲು ಮಾಡಲಾಗಿದೆ. ಚುನಾವಣಾ ತಕರಾರು ಅರ್ಜಿಗಳು ನಕಲು ಮಾಡುವಂತಹ ಅರ್ಜಿಗಳಲ್ಲ. ಅವುಗಳನ್ನು ರೂಪಿಸಲು ಗಂಭೀರ ಸಿದ್ದತೆ ಮಾಡಬೇಕು. ಮತ್ತೊಂದು ಅರ್ಜಿಯಲ್ಲಿರುವ ಅಲ್ಪ ವಿರಾಮ, ಪೂರ್ಣವಿರಾಮ ಮತ್ತು ವ್ಯಾಕರಣ ದೋಷಗಳು ಈ ಅರ್ಜಿಯಲ್ಲಿಯೂ ಯಥಾವತ್ತಾಗಿದೆ. ಇದಕ್ಕಾಗಿ ಅರ್ಜಿದಾರರ ವಿರುದ್ದ ಕ್ರಮವಾಗಬೇಕು ಎಂದು ಕೋರಿದರು.

ಇದಕ್ಕೂ ಮುನ್ನ, ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಉಲ್ಲೇಖಿಸುವ ಅಂಶಗಳು ಭವಿಷ್ಯದಲ್ಲಿ ರಚನೆಯಾಗುವ ಸರ್ಕಾರದ ಭರವಸೆಗಳೇ ವಿನಾ ಅಭ್ಯರ್ಥಿಯ ವೈಯಕ್ತಿಕ ಭರವಸೆಗಳಲ್ಲ. ಪ್ರಣಾಳಿಕೆಯಲ್ಲಿನ ಭರವಸೆಗಳು ಚುನಾವಣಾ ಅಕ್ರಮ ಎನ್ನಲಾಗದು ಎಂದು ವಾದಿಸಿದರು.

ಪ್ರಜಾ ಪ್ರತಿನಿಧಿ ಕಾಯಿದೆಯಲ್ಲಿ ಪಕ್ಷ ಮತ್ತು ಅಭ್ಯರ್ಥಿಯನ್ನು ಪ್ರತ್ಯೇಕಿಸಲಾಗಿದೆ. ಪಕ್ಷದ ಘೋಷಣೆಗಳನ್ನು ಅಭ್ಯರ್ಥಿ ಘೋಷಣೆಗಳನ್ನಾಗಿ ಪರಿಗಣಿಸಲಾಗುದು ಎಂದು ಪೀಠಕ್ಕೆ ವಿವರಿಸಿದರು.

ರಾಜಕೀಯ ಪಕ್ಷಗಳು ಪ್ರಣಾಳಿಕೆ ಸಿದ್ದಪಡಿಸುವುದಕ್ಕೆ ಅಧಿಕಾರವಿದೆ ಎಂದು ಚುನಾವಾಣಾ ಆಯೋಗ ಹೇಳಿದೆ. ಅಲ್ಲದೇ, ಚುನಾವಣಾ ಪ್ರಣಾಳಿಕೆ ಭರವಸೆಗಳು ಭ್ರಷ್ಟಾಚಾರದ ಅಡಿಯಲ್ಲಿ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬಡತನ ಮತ್ತು ನಿರುದ್ಯೋಗ ನಿವಾರಣೆ ಮಾಡುವುದಕ್ಕೆ ಸರ್ಕಾರ ಮುಂದಾಗುವುದಕ್ಕೆ ಸಂವಿಧಾನದಲ್ಲಿಯೂ ಅವಕಾಶ ಕಲ್ಪಿಸಲಾಗಿದೆ. ಮತದಾರರಿಗೆ ಸರ್ಕಾರ ಭರವಸೆಗಳನ್ನು ನೀಡುವ ಮೂಲಕ ಅದನ್ನು ಈಡೇರಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ರವಿವರ್ಮ ಕುಮಾರ್​ ವಿವರಿಸಿದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ವಾದಿಸಿದರು. ವಾದ ಆಲಿಸಿದ ಪೀಠವು ಅರ್ಜಿಯ ವಿಚಾರಣೆಯನ್ನು ಏಪ್ರಿಲ್‌ 24ಕ್ಕೆ ಮುಂದೂಡಿದೆ.

SCROLL FOR NEXT