ಪ್ರಧಾನಿ ಮೋದಿ
ಪ್ರಧಾನಿ ಮೋದಿ PTI
ರಾಜ್ಯ

ಬೆಂಗಳೂರು-ಚಿಕ್ಕಬಳ್ಳಾಪುರದಲ್ಲಿ ಇಂದು ಮೋದಿ ಸಾರ್ವಜನಿಕ ಸಭೆ: ಸಂಚಾರ ಮಾರ್ಗ ಬದಲಾವಣೆ ಮಾಹಿತಿ!

Vishwanath S

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಇಂದು ಕರ್ನಾಟಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ಅವರು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಬಿಜೆಪಿ ಕರ್ನಾಟಕ ಘಟಕದ ಪ್ರಕಾರ, ಚಿಕ್ಕಬಳ್ಳಾಪುರದ ಚೊಕ್ಕಹಳ್ಳಿ ಗ್ರಾಮದಲ್ಲಿ ಮಧ್ಯಾಹ್ನ 2.00 ಗಂಟೆಗೆ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ರಾಜ್ಯದ ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಕಣಕ್ಕಿಳಿಸಿದೆ.

ಚಿಕ್ಕಬಳ್ಳಾಪುರದ ಬಳಿಕ ಬೆಂಗಳೂರಿಗೆ ಪ್ರಯಾಣಿಸುವ ಪ್ರಧಾನಿ ಮೋದಿ ಸಂಜೆ 4 ಗಂಟೆಗೆ ಅರಮನೆ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರು ನಗರ ಬಿಜೆಪಿಯ ಭದ್ರಕೋಟೆಯಾಗಿದ್ದು, ಅದರ ಮೂವರು ಸಂಸದರು ಬಿಜೆಪಿಗರೇ ಆಗಿದ್ದಾರೆ.

ನಾಳೆ ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಹಲವು ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ. ಈ ಹಿನ್ನಲೆ ವಾಹನ ಸವಾರರಿಗೆ ಅಡಚಣೆಯಾಗದಂತೆ ಸಂಚಾರಿ ಪೊಲೀಸರು ನಗರದ ಹನ್ನೊಂದು ರಸ್ತೆಗಳ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಿದ್ದಾರೆ. ಪ್ಯಾಲೇಸ್ ರಸ್ತೆ, ಜಯಮಹಲ್, ರಮಣಮಹರ್ಷಿ ರಸ್ತೆ, ಮೌಂಟ್ ಕಾರ್ಮೆಲ್ ರಸ್ತೆ, ಜಯರಾಮ್ ರಸ್ತೆ, ಸಿ ವಿ ರಾಮನ್ ರಸ್ತೆ, ನಂದಿದುರ್ಗ ರಸ್ತೆ, ಮೇಖ್ರಿ ಸರ್ಕಲ್, ವಸಂತನಗರ, ಬಳ್ಳಾರಿ ರಸ್ತೆ ಮತ್ತು ತರಳಬಾಳು ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಲಿದೆ. ಹೀಗಾಗಿ ಸಿಎಂಐಟಿ ಜಂಕ್ಷನ್, ನ್ಯೂ ಬಿಇಎಲ್ ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ಬಿಹೆಚ್ಇಎಲ್ ಜಂಕ್ಷನ್, ಹೆಬ್ಬಾಳ ಜಂಕ್ಷನ್, ಬಸವೇಶ್ವರ ಜಂಕ್ಷನ್ ಮೂಲಕ ಸಂಚರಿಸಲು ನಗರ ಸಂಚಾರ ಪೊಲೀಸರು ಸೂಚಿಸಿದ್ದಾರೆ.

ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾದ ನಂತರ ಇದು ಕರ್ನಾಟಕಕ್ಕೆ ಅವರ ನಾಲ್ಕನೇ ಭೇಟಿಯಾಗಿದೆ. ಮಾರ್ಚ್ 16ರಂದು ಚುನಾವಣಾ ದಿನಾಂಕ ಘೋಷಣೆಯಾದ ದಿನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಲಬುರಗಿಯಲ್ಲಿ ಅವರ ಮೊದಲ ಸಭೆ ನಡೆದಿತ್ತು. ಮುಂದಿನ ಸಾರ್ವಜನಿಕ ಸಭೆ ಶಿವಮೊಗ್ಗದಲ್ಲಿ ನಡೆದಿತ್ತು. ಆನಂತರ ಏಪ್ರಿಲ್ 14ರಂದು ಮೋದಿ ಮೈಸೂರು ಮತ್ತು ಮಂಗಳೂರಿನಲ್ಲಿ ಪ್ರಚಾರ ನಡೆಸಿದ್ದರು.

SCROLL FOR NEXT