ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ  
ರಾಜ್ಯ

KCET exam: ಸಿಇಟಿ ಪರೀಕ್ಷೆಯಲ್ಲಿ ಔಟ್ ಆಫ್ ಸಿಲಬಸ್ ಪ್ರಶ್ನೆಗಳು; ವಿದ್ಯಾರ್ಥಿಗಳಲ್ಲಿ ಆತಂಕ, ಗೊಂದಲ

Sumana Upadhyaya

ಬೆಂಗಳೂರು: ಕಳೆದ ಗುರುವಾರ ಮತ್ತು ಶುಕ್ರವಾರ ರಾಜ್ಯಾದ್ಯಂತ ನಡೆದ ವಿವಿಧ ವೃತ್ತಿಪರ ಕೋರ್ಸಗಳ ಸಾಮಾನ್ಯ ಪ್ರವೇಶ ಪರೀಕ್ಷೆ (CET Exam) ಯಲ್ಲಿ ಕೈಬಿಟ್ಟಿರುವ ಪಠ್ಯಕ್ರಮ ಹಾಗೂ ವಿಷಯೇತರ ಪ್ರಶ್ನೆಗಳು ಹಲವು ಬಂದಿದ್ದರಿಂದ ವಿದ್ಯಾರ್ಥಿಗಳಿಗೆ ಈ ಬಾರಿ ಗೊಂದಲ ಮತ್ತು ಪರೀಕ್ಷೆ ಕಠಿಣವಾಗಿತ್ತು ಎಂದು ಹಲವರು ಹೇಳುತ್ತಿದ್ದಾರೆ.

ಜೀವಶಾಸ್ತ್ರ ಪರೀಕ್ಷೆಯಲ್ಲಿ ಕಡಿತಗೊಳಿಸಲಾದ ಪಠ್ಯ ಕ್ರಮದಿಂದ 10 ಪ್ರಶ್ನೆಗಳನ್ನು ಕೇಳಿದರೆ, ಗಣಿತದಲ್ಲಿ 11 ಪ್ರಶ್ನೆಗಳನ್ನು ಕೇಳುವ ಮೂಲಕ ವಿದ್ಯಾರ್ಥಿಗಳ ಕನಸಿಗೆ ಕೊಕ್ಕೆ ಹಾಕಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೋರ್ಡನಿಂದ ನಡೆಸುವ ಪರೀಕ್ಷಾ ಪ್ರಶ್ನೆ ಪತ್ರಿಕೆಯಾಗಲಿ, ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ ಇ ಟಿ) ಯಾಗಲಿ ವಿದ್ಯಾರ್ಥಿ ಸ್ನೇಹಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸಬೇಕು. ಹಾಗೆಂದ ಮಾತ್ರಕ್ಕೆ ಸರಳ ಪ್ರಶ್ನೆಗಳನ್ನು ಕೇಳಬೇಕೆಂದಲ್ಲ ಎಂದೂ ಸಮಜಾಯಿಸಿ ನೀಡಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕೆಸಿಇಟಿ 2023 ರ ಸಮಯದಲ್ಲಿ ನಿಗದಿಪಡಿಸಲಾದ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಿದೆ ಎಂದು ಅವರು ಶಂಕಿಸಿದ್ದಾರೆ. ಎಲ್ಲಾ ನಾಲ್ಕು ಪತ್ರಿಕೆಗಳಿಂದ 51 ಅಂಕಗಳಿಗೆ ಪಠ್ಯಕ್ರಮದ ಹೊರಗಿನ ಪ್ರಶ್ನೆಗಳಿವೆ ಎಂದು ಅಧಿಕಾರಿಗಳು ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಕಠಿಣ ಪ್ರಶ್ನೆಗಳು ಇದ್ದರೂ ಕೂಡ ಕೈಬಿಟ್ಟಿರೋ ಪಠ್ಯಕ್ರಮ ಹಾಗೂ ವಿಷಯಗಳ ಪ್ರಶ್ನೆಗಳು ಬಂದರೆ ವಿದ್ಯಾರ್ಥಿಗಳು ಗಲಿಬಿಲಿಗೊಳ್ಳುವುದು ಸಹಜ. ಗ್ರಾಮಾಂತರ ವಿದ್ಯಾರ್ಥಿಗಳಿಗೆ ಸರಿಯಾದ ತರಬೇತಿ ಮತ್ತು ಅದರ ಬಗ್ಗೆ ಪರಿಪೂರ್ಣ ಜ್ಞಾನವಿರುವದಿಲ್ಲ. ಹೀಗಿದ್ದಾಗ ಕೋವಿಡ್ ಸಂದರ್ಭದಲ್ಲಿ ಜೀವಶಾಸ್ತ್ರ ಪಠ್ಯದಲ್ಲಿ ಕಡಿತಗೊಳಿಸಲಾದ 5 ಅಧ್ಯಾಯಗಳಿಂದ 10 ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಸಿಇಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಾಗಿರುವ ಲೋಪದ ಕುರಿತು ಮಾಹಿತಿ ನೀಡಿದ್ದಾರೆ.

ಗಣಿತ ವಿಷಯ ಪಠ್ಯದಿಂದ ಕೈ ಬಿಟ್ಟಿರುವ 3 ಪಠ್ಯಗಳಿಂದ ಸಿಇಟಿ ಪರೀಕ್ಷೆಯಲ್ಲಿ 11 ಪ್ರಶ್ನೆಗಳನ್ನು ಕೇಳಲಾಗಿದೆ. ಇನ್ನುಳಿದಂತೆ ಇಂದು ನಡೆದ ಭೌತಶಾಸ್ತ್ರ ವಿಷಯದಲ್ಲಿ ಕೈಬಿಟ್ಟಿರುವ ಕೆಲ ವಿಷಯಗಳಿಂದ 5 ಪ್ರಶ್ನೆಗಳನ್ನು ಕೇಳಲಾಗಿದೆ. ರಸಾಯನ ಶಾಸ್ತ್ರದಲ್ಲಿ ಕೈ ಬಿಟ್ಟಿರೋ 8 ಪಠ್ಯಗಳಿಂದ 18 ಪ್ರಶ್ನೆಗಳನ್ನು ಕೇಳಲಾಗಿದೆ. ಈ ಕಾರಣಗಳಿಂದ ಸಿಇಟಿ ಎದುರಿಸಿರೋ ವಿದ್ಯಾರ್ಥಿಗಳಿಗೆ ಇದು ಸಮಸ್ಯೆಯಾಗಿದೆ. ಅತಿ ಹೆಚ್ಚು ಅಂಕ ಗಳಿಸಿ ರ್ಯಾಂಕ್ ಪಡೆದು ಇಂಜಿನಿಯರಿಂಗ್​, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಮುಂತಾದ ವೃತ್ತಿಪರ ಕೋರ್ಸಗಳನ್ನು ಸೇರುವ ಭವಿಷ್ಯ ಕನಸು ಕಾಣುತ್ತಿದ್ದ ವಿದ್ಯಾರ್ಥಿಗಳ ಆಸೆಗೆ ತಣ್ಣೀರು ಎರೆಚಿದಂತಾಗಿದೆ ಎಂದು ಸಿಇಟಿ ಪರೀಕ್ಷಾ ಪ್ರಾಧಿಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

SCROLL FOR NEXT