ನೇಹಾ ಹಿರೇಮಠ್ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ, ಹುಬ್ಬಳ್ಳಿಯಲ್ಲಿ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ  
ರಾಜ್ಯ

ನೇಹಾ ಹಿರೇಮಠ್ ಹತ್ಯೆ: ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರಿಂದ ತೀವ್ರ ಪ್ರತಿಭಟನೆ

ಬೆಂಗಳೂರು: ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಇಂದು ಸೋಮವಾರ ಬಿಜೆಪಿ ರಾಜ್ಯ ಘಟಕವು ಬೆಂಗಳೂರು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.

ನೇಹಾ ಹತ್ಯೆ ಪ್ರಕರಣದಲ್ಲಿ 'ಲವ್ ಜಿಹಾದ್' ಇದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಬಿಜೆಪಿ ಕೇಂದ್ರ ಸಚಿವರು ಸೇರಿದಂತೆ ಬಿಜೆಪಿ ಎಲ್ಲಾ ನಾಯಕರು ಇದು ಲವ್ ಜಿಹಾದ್ ಪ್ರಕರಣ ಎಂದೂ, ಇದನ್ನು ಅದೇ ದೃಷ್ಟಿಯಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ರಾಜ್ಯ ಸರ್ಕಾರ ಈ ವಿಷಯದಲ್ಲಿ ಮೃದು ಧೋರಣೆ ತಳೆದಿದೆ ಎಂದು ಆರೋಪಿಸಿದೆ.

ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಂಘಟನೆಗಳು ಬಂದ್ ಗೆ ಕರೆ ನೀಡಿ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿವೆ. ಹುಬ್ಬಳ್ಳಿಯ ಅಂಜುಮನ್ ಸಂಸ್ಥೆ ನೇಹಾ ಹಿರೇಮಠ ಹತ್ಯೆ ಖಂಡಿಸಿ ಇಂದು ಧಾರವಾಡ ಬಂದ್‌ಗೆ ಕರೆ ನೀಡಿದ್ದಾರೆ. ನೇಹಾ ಹತ್ಯೆ ಖಂಡಿಸಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಬಂದ್‌ಗೆ ಕರೆ ನೀಡಿರುವ ಬೆನ್ನಲ್ಲೇ ಮುಸ್ಲಿಂ ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್ ಆಗಿದೆ. ಹುಬ್ಬಳ್ಳಿಯ ಶಾಹ ಬಜಾರ್ ಮತ್ತು ನೂರಾನಿ ಮಾರ್ಕೆಟ್ ವ್ಯಾಪಾರಸ್ಥರಿಂದ ಬಂದ್‌ಗೆ ಬೆಂಬಲ ನೀಡಲಾಯಿತು.

ಅಂಗಡಿ- ಮುಗ್ಗಟ್ಟುಗಳನ್ನ ಬಂದ್ ಮಾಡಿ ನೇಹಾ ಹತ್ಯೆಯನ್ನು ‌ಖಂಡಿಸಿದ ವ್ಯಾಪಾರಸ್ಥರು, ಬೆಳಗ್ಗೆ 8ರಿಂದ ಮಧ್ಯಾಹ್ನ 3ಗಂಟೆಯವರೆಗೆ ಅಂಗಡಿಗಳು ಬಂದ್ ಆಗಿರಲಿದ್ದು, ಜಸ್ಟಿಸ್ ಟು ನೇಹಾ ಹಿರೇಮಠ ಎಂದು ತಮ್ಮ ಅಂಗಡಿಗಳಿಗೆ ಬೋರ್ಡ್‌ಗಳನ್ನು ಹಾಕಿ ಬಂದ್‌ಗೆ ಬೆಂಬಲ ನೀಡಿದ್ದಾರೆ. ಹಂತಕ ಫಯಾಜ್‌‌ನಿಗೆ ಉಗ್ರವಾದ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಬಂದ್‌‌ಗೆ ಕರೆ ನೀಡಿದ್ದು, ಮಾರುಕಟ್ಟೆಯ ಪ್ರದೇಶಗಳು ಬಿಕೋ ಎನ್ನುತ್ತಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯನ್ನು ನೆರೆಯ ಪಾಕಿಸ್ತಾನದ ಸ್ಥಿತಿಯೊಂದಿಗೆ ಹೋಲಿಸಿದ್ದು, ರಾಜ್ಯದಲ್ಲಿ ಹಿಂಸೆ ತಾಂಡವವಾಡುತ್ತಿದೆ ಎಂದಿದ್ದಾರೆ. ಜೊತೆಗೆ ಕಾಂಗ್ರೆಸ್‌ನ ಕೈಯಲ್ಲಿ ರಕ್ತ ಅಮಟಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

"ಹಿಂಸೆ..ಅಪರಾಧಗಳು..ಕೊಲೆಗಳು! ರಾಜ್ಯದ ಶಾಂತಿಪ್ರಿಯ ನಾಗರಿಕರಿಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ. ಮಹಿಳೆಯರು ಇನ್ನು ಸುರಕ್ಷಿತವಾಗಿಲ್ಲ!, ಹಿಂದೂಗಳು "ಜೈ ಶ್ರೀ ರಾಮ್" ಘೋಷಣೆ ಮಾಡುವಂತಿಲ್ಲ!, ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಕ್ಕೆ ಯುವಕರನ್ನು ಅಮಾನುಷವಾಗಿ ಥಳಿಸಿದ್ದಾರೆ, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ!, ಕನ್ನಡದಲ್ಲಿ ಮಾತನಾಡಿದ ಕನ್ನಡತಿಗೆ ನಿಂದನೆ!, ಪ್ರತಿ ದಿನವೂ ಪ್ರತಿ ಸಣ್ಣ ಪಟ್ಟಣದಿಂದ ಚೈನ್ ಸ್ನ್ಯಾಚಿಂಗ್ ವರದಿ!, ಕೆಫೆಯಲ್ಲಿ ಬಾಂಬ್ ಸ್ಫೋಟ!,ವಿಧಾನಸೌಧದಲ್ಲಿ ಮೊಳಗಿದ "ಪಾಕಿಸ್ತಾನ್ ಜಿಂದಾಬಾದ್" ಘೋಷಣೆ!" ಎಂದು ಸರಣಿ ಘಟನೆಗಳನ್ನು ನೆನಪಿಸಿ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

ಇತ್ತ ಫಯಾಸ್​ ನೀತ ಕೃತ್ಯವನ್ನ ಮುಸ್ಲಿಂ ಸಮುದಾಯದ (Muslim Community ) ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಆರೋಪಿ ಪರ ಮುಸ್ಲಿಂ ವಕೀಲರು ವಾದ ಮಾಡಲ್ಲ ಅಂತ ಹೇಳಿದ್ದಾರೆ. ಅಲ್ಲದೇ ನೇಹಾ ಹತ್ಯೆ ಖಂಡಿಸಿ ಇಂದು ಮುಸ್ಲಿಂ ಸಮುದಾಯ ಧಾರವಾಡದಲ್ಲಿ (Dharwad) ಅರ್ಧ ದಿನ ಸ್ವಯಂ ಪ್ರೇರಿತ ಬಂದ್‌ಗೆ ಕರೆ ಕೊಟ್ಟಿದೆ.

ಸಿಬಿಐ ತನಿಖೆಗೆ ನಡ್ಡಾ ಆಗ್ರಹ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವನ್ನ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ನಿನ್ನೆ ನೇಹಾ ಮನೆಗೆ ಭೇಟಿ ಕೊಟ್ಟ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ನೇಹಾ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹುಬ್ಬಳ್ಳಿಯ ಖಾಸಗಿ ಹೋಟೆಲ್‌‌‌ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಪೊಲೀಸರ ಮೇಲೆ ಭರವಸೆ ಇಲ್ಲ. ತನಿಖೆಯ ಹಾದಿ ಬದಲಾಗ್ತಿದೆ. ಸಿಬಿಐನಿಂದ ತನಿಖೆ ಆಗ್ಬೇಕು ಅಂತ ಆಗ್ರಹಿಸಿದ್ದಾರೆ.

ಸರ್ಕಾರ ಮೃದು ಧೋರಣೆ, ನೇಹಾ ತಂದೆ ಆರೋಪ: ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಕೊಲೆಗಾರರ ಬಗ್ಗೆ ಮೃದು ಧೋರಣೆ ಹೊಂದಿದೆ ಎಂದು ನೇಹಾ ತಂದೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್​ ಸದಸ್ಯ ನಿರಂಜನ ಹಿರೇಮಠ ಸ್ವಪಕ್ಷದ ವಿರುದ್ಧ ಆರೋಪ ಮಾಡಿದ್ದಾರೆ. ಈ ಬಗ್ಗೆ ಎಎನ್​​ಐ ಜೊತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಎಂಟು ಜನ ಭಾಗಿಯಾಗಿದ್ದಾರೆ, ಅವರ ಹೆಸರನ್ನೂ ಹೇಳಿದ್ದೇನೆ. ಆದರೆ ಈವರೆಗೂ ಒಬ್ಬರನ್ನೂ ಬಂಧಿಸಿಲ್ಲ. ಪ್ರಕರಣವನ್ನು ತಿರುಚಲು ಯತ್ನಿಸುತ್ತಿದ್ದು, ಇವರ ಮೇಲೆ ವಿಶ್ವಾಸ ಕಳೆದುಕೊಂಡಿದ್ದೇನೆ. ಹೀಗಾಗಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (CBI) ತನಿಖೆಗೆ ನೀಡಿ ಎಂದು ಒತ್ತಾಯಿಸಿದ್ದಾರೆ.

ಏನಿದು ನೇಹಾ ಹಿರೇಮಠ್ ಕೊಲೆ ಪ್ರಕರಣ? ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಆರೋಪಿ ಫಯಾಜ್ ಖೋಂಡುನಾಯ್ಕ್ ಕ್ಯಾಂಪಸ್‌ನಲ್ಲಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ. ಇಬ್ಬರು ಪ್ರೀತಿಸುತ್ತಿದ್ದು, ಆಕೆ ಆತನ ಪ್ರೀತಿ ನಿವೇದನೆಯನ್ನು ನಿರಾಕರಿಸಿ ದೂರವುಳಿಯಲು ಪ್ರಯತ್ನಿಸಿದ್ದಕ್ಕೆ ಆಕೆಯನ್ನು ಕೊಲೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ, ಸಂತ್ರಸ್ತೆಯ ಕುಟುಂಬದವರು, ಆಕೆ ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ್ದರಿಂದ ಆರೋಪಿ ನೇಹಾಳನ್ನು ಕೊಂದಿದ್ದಾನೆ ಎಂದು ಆರೋಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

SCROLL FOR NEXT