ಬೆಂಗಳೂರು: ನಗರದಲ್ಲಿ ನೋಂದಣಿಯಾಗದ ಪೇಯಿಂಗ್ ಗೆಸ್ಟ್ (ಪಿಜಿ)ಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ.
ಕೋರಮಂಗಲದ ವಸತಿ ಗೃಹದಲ್ಲಿ ಯುವತಿ ಬರ್ಬರ ಹತ್ಯೆ ಘಟನೆ ಬೆನ್ನಲ್ಲೇ ಇತ್ತೀಚೆಗಷ್ಟೇ ಪಾಲಿಕೆ ನಗರ ವ್ಯಾಪ್ತಿಯ‘ಪೇಯಿಂಗ್ ಗೆಸ್ಟ್’ (ಪಿಜಿ)ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು.
ಮಾರ್ಗಸೂಚಿ ಬೆನ್ನಲ್ಲೇ ಇದೀಗ ಪಾಲಿಕೆ ಅಧಿಕಾರಿಗಳು ಪಿಜಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿದ್ದು, ಮಾರ್ಗಸೂಚಿ ಅನುಸರಿಲದ ಪಿಜಿಗಳ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ವಿಶೇಷ ಆಯುಕ್ತ ಸೂರಳ್ಕರ್ ರ್ ವಿಕಾಸ್ ಕಿಶೋರ್ ಮಾತನಾಡಿ, ಮಾರ್ಗೂಸೂಚಿಯಲ್ಲಿ ಹಲವು ಅಂಶಗಳನ್ನು ತಿಳಿಸಲಾಗಿದೆ. ಈ ಪೈಕಿ ನಿಗದಿತ ಸಂಖ್ಯೆಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಬೇಕು. ಹೆಚ್ಚುವರಿಯಾಗಿರುವವರಿಗೆ ಹೊಸ ಸೌಲಭ್ಯಗಳ ಕಲ್ಪಿಸಬೇಕೆಂದು ತಿಳಿಸಲಾಗಿದೆ. ಮಾರ್ಗಸೂಚಿ ಅನುಸರಣೆಗೆ ಸೆಪ್ಟೆಂಬರ್ 15ರವರೆಗೆ ಗಡುವು ನೀಡಲಾಗಿದ್ದು, ನಂತರ ಕ್ರಮಕ್ಕೆ ಮುಂದಾಗಲಾಗುವುದು ಎಂದು ಹೇಳಿದ್ದಾರೆ.
ಕಳೆದ ಜುಲೈ ತಿಂಗಳಿನಲ್ಲಿ ಕೋರಮಂಗಲದ ವಸತಿ ಗೃಹಕ್ಕೆ ನುಗ್ಗಿದ್ದ ಆರೋಪಿಯೊಬ್ಬ ಮಹಿಳೆಯೊಬ್ಬರಿಗೆ ಮನಬಂದಂತೆ ಚೂರಿ ಇರಿದು ಹತ್ಯೆಗೈದಿದ್ದ. ಈ ಘಟನೆ ಇಡೀ ರಾಜಧಾನಿಯನ್ನೇ ಬೆಚ್ಚಿ ಬೀಳಿಸಿತ್ತು. ಘಟನೆ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಪಿಜಿ ಗಳಿಗೆ ಮಾರ್ಗಸೂಚಿ ಹೊರಡಿಸುವಂತೆ ಸೂಚಿಸಿತ್ತು.
ಮಾರ್ಗಸೂಚಿ ಬೆನ್ನಲ್ಲೇ ಇದೀಗ 2,000 ಪಿಜಿಗಳು ನೋಂದಾವಣಿ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ10,000ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹದೇವಪುರ ಮತ್ತು ಬೊಮಮನಹಳ್ಳಿ, ಐಟಿ ವಲಯಗಳಲ್ಲಿ ಹೆಚ್ಚು ಪಿಜಿಗಳಿದ್ದು, ಮಹದೇವಪುರದಲ್ಲಿರುವ ನೋಂದಾವಣಿಯಾಗದ ಪಿಜಿಗಳಲ್ಲಿ ಪ್ರತಿ ಕೊಠಡಿಯಲ್ಲಿ 75 ಮಂದಿ ಇದ್ದಾರೆಂದು ಮೂಲಗಳು ತಿಳಿಸಿವೆ.