ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳನೊಬ್ಬ ವೃದ್ಧ ಮಹಿಳೆಯನ್ನು 20 ಮೀಟರ್ ವರೆಗೆ ಎಳೆದೊಯ್ದು ಸರಗಳ್ಳತನ ಮಾಡಿರು ಘಟನೆಯೊಂದು ನಗರದ ಕೆಂಗೇರಿಯಲ್ಲಿ ವರದಿಯಾಗಿದೆ.
ಮುದ್ದಮ್ಮ (73) ಸರ ಕಳೆದುಕೊಂಡ ವೃದ್ಧ ಮಹಿಳೆಯಾಗಿದ್ದಾರೆ. ಘಟನೆಯಿಂದಾಗಿ ಮಹಿಳೆಯ ಎಡಗೈ ಮೂಳೆ ಮುರಿತಕ್ಕೊಳಗಾಗಿದ್ದು, ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.
ಕಳೆದ ಶನಿವಾರ ಕೆಂಗೇರಿ ಸ್ಯಾಟಲೈಟ್ ಟೌನ್ 7ನೇ ಕ್ರಾಸ್, 6ನೇ ಮುಖ್ಯರಸ್ತೆಯಲ್ಲಿರುವ ಮಹಿಳೆಯ ಮನೆಯ ಮುಂದೆ ಘಟನೆ ನಡೆದಿದೆ.
ಮುದ್ದಮ್ಮ ಅವರು ಮನೆಯ ಮುಂದೆ ವಾಕಿಂಗ್ ಮಾಡುತ್ತಿದ್ದಾಗ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ವಿಳಾಸ ಕೇಳುವ ನೆಪದಲ್ಲಿ ಹತ್ತಿರ ಹೋಗಿದ್ದಾನೆ. ಈ ವೇಳೆ ಮಹಿಳೆ ವಿಳಾಸ ಹೇಳುತ್ತಿದ್ದಾಗ ಆಕೆಯ ಸರ ಕಸಿಯಲು ಯತ್ನಿಸಿದ್ದಾನೆ, ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಆಕೆಯನ್ನು 20 ಮೀಟರ್ ಎಳೆದೊಯ್ದಿದ್ದಾನೆ. ಬಳಿಕ ಸರ ಕಸಿದು, ಪರಾರಿಯಾಗಿದ್ದಾನೆ.
ಈ ವೇಳೆ ರಸ್ತೆಯಲ್ಲಿ ಮುದ್ದಮ್ಮ ಅವರ ಎಡಗೈ ಮೂಳೆ ಮುರಿತವಾಗಿದ್ದು, ಹಣೆಗೆ ತೀವ್ರತರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ತಾಯಿಯ ಎಡಗೈ ಹಾಗೂ ಹಣೆಯ ಮೇಲೆ ರಕ್ತಸ್ರಾವವಾಗುತ್ತಿತ್ತು. ಬಳಿಕ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಹಣೆಯ ಮೇಲೂ ಮೂರು ಹೊಲಿಗೆ ಹಾಕಲಾಗಿದೆ. ಘಟನೆ ವೇಳೆ ರಸ್ತೆಯಲ್ಲಿ ಯಾರೂ ಇರಲಿಲ್ಲ ಎಂದು ಮುದ್ದಮ್ಮ ಅವರ ಪುತ್ರ ಸಿ.ಸುರೇಶ್ ಅವರು ಹೇಳಿದ್ದಾರೆ.
ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.