16 ನೇ ಹಣಕಾಸು ಆಯೋಗಕ್ಕೆ ಸಿಎಂ ಸಿದ್ದರಾಮಯ್ಯ ಮನವಿ 
ರಾಜ್ಯ

ಅನುದಾನ ಹಂಚಿಕೆಯಲ್ಲಿ ಸಮತೋಲನವಿರಲಿ: 16 ನೇ ಹಣಕಾಸು ಆಯೋಗಕ್ಕೆ ಸಿಎಂ ಸಿದ್ದರಾಮಯ್ಯ ಮನವಿ

ರಾಷ್ಟ್ರೀಯ ಜಿಡಿಪಿಗೆ ಕರ್ನಾಟಕ ಸುಮಾರು ಶೇ8.4ರಷ್ಟು ಕೊಡುಗೆ ನೀಡುತ್ತಿದೆ. ಜಿಎಸ್ ​ಟಿ ಸಂಗ್ರಹದಲ್ಲಿ ಕರ್ನಾಟಕ ದೇಶಕ್ಕೆ ಎರಡನೇ ಅತಿ ದೊಡ್ಡ ರಾಜ್ಯವಾಗಿದೆ.

ಬೆಂಗಳೂರು: 16ನೇ ಹಣಕಾಸು ಆಯೋಗ ಅನುದಾನ ಹಂಚಿಕೆ ಸಮತೋಲಿತ ಹಾಗೂ ಪಾರದರ್ಶಕತೆಯಿಂದ ಕೂಡಿರಲಿ ಎಂಬುದು ರಾಜ್ಯದ ನಿರೀಕ್ಷೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಅರವಿಂದ ಪನಗಾರಿಯ ಹಾಗೂ ಸದಸ್ಯರೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು ಉತ್ತಮವಾಗಿ ಅಭಿವೃದ್ಧಿ ಕಾಣುತ್ತಿರುವ ರಾಜ್ಯಗಳತ್ತ ಹಣಕಾಸು ಆಯೋಗ ಸಮಾನ ಆದ್ಯತೆ ನೀಡುವ ಅಗತ್ಯ ಇದೆ. ಪ್ರಗತಿಶೀಲ ರಾಜ್ಯಗಳ ಜನತೆ ತಮ್ಮ ತೆರಿಗೆ ಹಣದಿಂದ ರಾಜ್ಯಕ್ಕೆ ಅನುಕೂಲಕರವಾಗಿರಬೇಕು ಎಂಬ ನಿರೀಕ್ಷೆ ಹೊಂದಿದ್ದಾರೆ ಎಂದು ತಿಳಿಸಿದರು.

ಕರ್ನಾಟಕವು ದೇಶದ ಪ್ರಗತಿಯಲ್ಲಿ ಕೇಂದ್ರ ಬಿಂದುವಾಗಿದೆ. ರಾಷ್ಟ್ರೀಯ ಜಿಡಿಪಿಗೆ ಕರ್ನಾಟಕ ಸುಮಾರು ಶೇ8.4ರಷ್ಟು ಕೊಡುಗೆ ನೀಡುತ್ತಿದೆ. ಜಿಎಸ್ ​ಟಿ ಸಂಗ್ರಹದಲ್ಲಿ ಕರ್ನಾಟಕ ದೇಶಕ್ಕೆ ಎರಡನೇ ಅತಿ ದೊಡ್ಡ ರಾಜ್ಯವಾಗಿದೆ. ರಾಜ್ಯದಿಂದ ವಾರ್ಷಿಕ ಸುಮಾರು 4 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ತೆರಿಗೆ ಹಣ ಕೇಂದ್ರಕ್ಕೆ ಹೋಗುತ್ತಿದೆ. ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ವಾರ್ಷಿಕ ಸುಮಾರು 45 ಸಾವಿರ ಕೋಟಿ ರೂ., ಇದೆ ಆದರೆ 15,000 ಕೋಟಿ ರೂ. ಮಾತ್ರ ಕೇಂದ್ರದಿಂದ ಅನುದಾನ ಬರುತ್ತಿದೆ. ಆ ಮೂಲಕ ರಾಜ್ಯ ಕೇಂದ್ರಕ್ಕೆ ನೀಡುವ ಒಂದು ರೂಪಾಯಿಗೆ ವಾಪಸು ಕೇವಲ 15 ಪೈಸೆ ಮಾತ್ರ ಪಡೆಯುತ್ತಿದೆ ಎಂದು ವಿವರಿಸಿದರು.

ಕೇಂದ್ರದ ಅನುದಾನ ಹಂಚಿಕೆಯಲ್ಲಿ ಕಡಿತವಾಗಿರುವುದರಿಂದ ರಾಜ್ಯಗಳ ಭೌತಿಕ ಹಾಗೂ ಮಾನವ ಮೂಲಸೌಕರ್ಯ ಮೇಲಿನ ಹೂಡಿಕೆ ಸಾಮರ್ಥ್ಯವನ್ನು ಕಡಿಮೆ ಮಾಡಿದೆ. ಇದನ್ನು ತ್ವರಿತವಾಗಿ ಪರಿಹರಿಸಬೇಕಾಗಿದೆ‌. ಆರ್ಥಿಕವಾಗಿ ಸುಧಾರಿತ ರಾಜ್ಯಗಳು ಬಡ ರಾಜ್ಯಗಳನ್ನು ಸಹಕರಿಸಲು ಬದ್ಧವಾಗಿದೆ. ಆದರೆ, ಅದರಿಂದ ಸುಧಾರಿತ ರಾಜ್ಯಗಳಿಗೆ ಸಮಸ್ಯೆ ಆಗಬಾರದು. ರಾಜ್ಯಗಳಿಂದ ಸಂಗ್ರಹವಾಗುವ ಸಂಪನ್ಮೂಲದಲ್ಲಿ ದೊಡ್ಡ ಪಾಲನ್ನು ಆ ರಾಜ್ಯಗಳಿಗೆ ನೀಡಬೇಕು ಎಂದು ಮನವಿ ಮಾಡಿದರು.

ಒಟ್ಟು ತೆರಿಗೆ ಆದಾಯದಲ್ಲಿ ಸೆಸ್ ಹಾಗೂ ಸರ್ಚಾರ್ಜ್ ಅನ್ನು ಶೇ. 5 ರಷ್ಟು ಮಿತಿಗೊಳಿಸಬೇಕು. ಅದಕ್ಕಿಂತ ಹೆಚ್ಚಿನದ್ದು ತೆರಿಗೆ ಹಂಚಿಕೆಯ ಭಾಗವಾಗಬೇಕು‌. ಕೇಂದ್ರದ ತೆರಿಗೇತರ ರಾಜಸ್ವವವನ್ನು ರಾಜ್ಯಗಳ ತೆರಿಗೆ ಹಂಚಿಕೆ ಪಾಲಿನಲ್ಲಿ ಸೇರಿಸುವ ಸಂಬಂಧ ತಿದ್ದುಪಡಿ ತರಬೇಕು. ರಾಜ್ಯಗಳ ತೆರಿಗೆ ಕೊಡುಗೆಯ ಶೇ 60 ರಷ್ಟು ಪಾಲನ್ನು ಆ ರಾಜ್ಯಕ್ಕೇ ನೀಡಬೇಕು ಎಂದು ಕರ್ನಾಟಕ ಶಿಫಾರಸು ಮಾಡುತ್ತದೆ ಎಂದು ತಿಳಿಸಿದ್ದಾರೆ. 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬರುವ ತೆರಿಗೆ ಶೇ 4.71ರಷ್ಟು ಪಾಲು ಇತ್ತು. 15ನೇ ಹಣಕಾಸು ಆಯೋಗದ ವೇಳೆ ಅದು ಶೇ 3.64 ಕ್ಕೆ ಇಳಿಕೆಯಾಗಿದೆ. ತೆರಿಗೆ ಪಾಲಿನಲ್ಲಿ ಶೇ 25 ಕಡಿಮೆಯಾಗಿದೆ. ಇದರಿಂದ 2021-2026ವರೆಗೆ ಐದು ವರ್ಷದಲ್ಲಿ ರಾಜ್ಯಕ್ಕೆ 68,275 ಕೋಟಿ ರೂ. ನಷ್ಟವಾಗಿದೆ. ಹಣಕಾಸು ಆಯೋಗ ಇದನ್ನು ಮನಗಂಡು ರಾಜ್ಯಕ್ಕೆ 11,495 ಕೋಟಿ ವಿಶೇಷ ಅನುದಾನವನ್ನು ಶಿಫಾರಾಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಆ ಶಿಫಾರಸನ್ನು ಸ್ವೀಕಾರ ಮಾಡಿಲ್ಲ. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಸುಮಾರು 79,770 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಿದರು.

ಕರ್ನಾಟಕ ವಿತ್ತೀಯವಾಗಿ ಉತ್ತನ ನಿರ್ವಹಣೆ ತೋರುತ್ತಿದ್ದರೂ ಕಡಿಮೆ ಅನುದಾನ ಪಡೆಯುವ ಮೂಲಕ ಶಿಕ್ಷೆಗೊಳಗಾಗಿದೆ. ಸೆಸ್ ಹಾಗೂ ಸರ್ಚಾರ್ಜ್ ರಾಜ್ಯಗಳಿಗೆ ನೀಡುವ ಕೇಂದ್ರದ ತೆರಿಗೆ ಹಂಚಿಕೆಯ ಭಾಗವಾಗಿಲ್ಲ. ಹಲವು ವರ್ಷಗಳಿಂದ ಕೇಂದ್ರ ಸರ್ಕಾರ ಸೆಸ್ ಹಾಗೂ ಸರ್ಚಾರ್ಜ್​ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರಿಂದ ರಾಜ್ಯಗಳಿಗೆ ದೊಡ್ಡ ಮಟ್ಟಿನ ನಷ್ಟವಾಗಿದೆ. ಇದರಿಂದ ಕರ್ನಾಟಕಕ್ಕೆ 2017-18 ರಿಂದ 2024-25ವರೆಗೆ ಸುಮಾರು 53,359 ಕೋಟಿ ರೂನ ನಷ್ಟವಾಗಿದೆ. ಕೇಂದ್ರದ ಅನುದಾದಲ್ಲಿ ದೊಡ್ಡ ಕಡಿತವಾಗಿದ್ದರೂ, ರಾಜ್ಯ ಸರ್ಕಾರ ತನ್ನ ಪಂಚ ಗ್ಯಾರಂಟಿಗಳಂಥ ಯೋಜನೆಗಳ ಜಾರಿಗೊಳಿಸಿ ತನ್ನ ಬದ್ಧತೆ ತೋರಿದೆ ಎಂದು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪ್ರಾದೇಶಿಕ ಅಸಮತೋಲನ ಇದೆ. ರಾಜ್ಯವೂ ನಗರೀಕರಣದ ಸಮಸ್ಯೆ ಎದುರಿಸುತ್ತಿದೆ. ಇದಕ್ಕಾಗಿ ಹೆಚ್ಚಿನ ಕೇಂದ್ರದ ತೆರಿಗೆ ಪಾಲು ಬೇಕಾಗಿದೆ.‌ ಬೆಂಗಳೂರಿಗೆ ಮುಂದಿನ ಐದು ವರ್ಷ 55,586 ಕೋಟಿ ರೂ. ಹೂಡಿಕೆಯ ಅಗತ್ಯ ಇದೆ. ಈ ಪೈಕಿ 27,793 ಕೋಟಿ ರೂ. ಕೇಂದ್ರಾನುದಾನದ ಮನವಿ ಮಾಡುತ್ತೇವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಐದು ವರ್ಷಗಳಲ್ಲಿ ರಾಜ್ಯ 25,000 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಈ ನಿಟ್ಟಿನಲ್ಲಿ 16ನೇ ಹಣಕಾಸು ಆಯೋಗ ನೆರವು ನೀಡುವಂತೆ ಕೋರುತ್ತೇನೆ. ಜೊತೆಗೆ ಅಪಾಯಕಾರಿ ಪಶ್ಚಿಮ ಘಟ್ಟ ಪ್ರದೇಶದ ಜನರ ಪುನರುಜ್ಜೀವನಕ್ಕಾಗಿ 10,000 ಕೋಟಿ ರೂ. ಬೇಕಾಗಿದೆ ಎಂದು ಮನವಿ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT