ಬೆಂಗಳೂರು: ಅಸುರಕ್ಷಿತರ ಆಹಾರಗಳ ಮೇಲೆ ಸಮರ ಸಾರಿರುವ ಆಹಾರ ಮತ್ತು ಗುಣಮಟ್ಟ ಸುರಕ್ಷತಾ ಇಲಾಖೆ, ಜನರಿಗೆ ತಾವು ತಿನ್ನುವ ಆಹಾರವನ್ನು ತಾವೇ ಪರೀಕ್ಷಿಸುವ ಅವಕಾಶವನ್ನು ನೀಡಲು ಸಜ್ಜಾಗಿದೆ.
ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಫುಡ್ ಕೋರ್ಟ್ ಮತ್ತು ಮಾಲ್‌ಗಳ ಬಳಿ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ಪರೀಕ್ಷಾ ಕಿಟ್‌ಗಳು ಲಭ್ಯವಿರಲಿದ್ದು, ಜನರೇ ತಾವು ತಿನ್ನುವ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ತಾವು ಸೇವಿಸುವ ಆಹಾರದ ಗುಣಮಟ್ಟವನ್ನು ತಾವೇ ಪರೀಕ್ಷಿಸಿಕೊಳ್ಳುವುದಕ್ಕಾಗಿ ಹೊಟೆಲ್ ರೆಸ್ಟೊರೆಂಟ್ ಫುಡ್‌ಪಾರ್ಕ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ 3400 ಪರೀಕ್ಷಾ ಕಿಟ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಒಂದು ಸಾವಿರ ಕಿಟ್‌ಗಳು ಬಂದಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿವೆ ಎಂದು ತಿಳಿಸಿದರು.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಪ್ರತಿ ತಿಂಗಳು ವಿವಿಧ ಮಾರಾಟ ಕೇಂದ್ರಗಳಿಂದ ನಿರ್ದಿಷ್ಟ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಆಯ್ಕೆ ಮಾಡುತ್ತದೆ. ಇದರಂತೆ ಆಗಸ್ಟ್‌ನಲ್ಲಿ ಬೇಕರಿ ತಿನಿಸುಗಳನ್ನು ವಿಶ್ಲೇಷಿಸಲು 211 ಪನ್ನೀರ್, 246 ಕೇಕ್, 67 ಕೋವಾದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು.
ಆಹಾರ ಸುರಕ್ಷತಾ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಇದೇ ಶುಕ್ರವಾರ ಮತ್ತು ಶನಿವಾರ ರಾಜ್ಯದಾದ್ಯಂತ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿರುವ ಹೋಟೆಲ್, ರೆಸ್ಟೋರೆಂಟ್‌ಗಳನ್ನು ಆಂದೋಲನದ ರೂಪದಲ್ಲಿ ತಪಾಸಣೆ ನಡೆಸಲಾಗುವುದು. ಮಾಂಸ, ಮೀನು, ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆ ನಡೆಸಲಾಗುವುದು.
ಏಪ್ರಿಲ್–ಜುಲೈವರೆಗೆ 8,418 ಸರ್ವೆ ಆಹಾರ ಮಾದರಿಗಳು ಮತ್ತು 2593 ಕಾನೂನಾತ್ಮಕ ಆಹಾರ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಜುಲೈ ತಿಂಗಳೊಂದರಲ್ಲೇ 2,753 ಸರ್ವೆ ಆಹಾರ ಮಾದರಿಗಳು ಮತ್ತು 711 ಕಾನೂನಾತ್ಮಕ ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಕಳಿಸಲಾಗಿದೆ. ಇದೇ ತಿಂಗಳಲ್ಲಿ 96 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ನೈರ್ಮಲ್ಯ ಕೊರತೆ ಕಂಡು ಬಂದ 132 ಆಹಾರ ಉದ್ದಿಮೆಗಳಿಗೆ ರೂ.4.93 ಲಕ್ಷ ದಂಡ ವಿಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಬಿಬಿಎಂಪಿ ವ್ಯಾಪ್ತಿ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ರಾಜ್ಯದ 13 ಜಿಲ್ಲೆಗಳಿಂದ ಹಣ್ಣು ಮತ್ತು ತರಕಾರಿಗಳ 385 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿದ್ದು, 27 ಮಾದರಿಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಪ್ರಮಾಣದ ಕ್ರಿಮಿನಾಶಕಗಳು ಮತ್ತು ಶಿಲೀಂಧ್ರ ಪತ್ತೆಯಾಗಿದೆ.
ಅಸುರಕ್ಷಿತ ಆಹಾರಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ 106 ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿವೆ. 34 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 18 ಪ್ರಕರಣಗಳಲ್ಲಿ ನ್ಯಾಯಾಲಯ ದಂಡವನ್ನು ವಿಧಿಸಿದೆ. ದೇವನಹಳ್ಳಿಯ ಕೆಎಫ್‌ಸಿ, ಬಿಬಿಎಂಪಿ ದಕ್ಷಿಣದಲ್ಲಿರುವ ನುಪ ಟೆಕ್ನಾಲಜೀಸ್, ಮಮತಾ ಏಜೆನ್ಸಿ ಮತ್ತು ಮೈಸೂರಿನ ವಿಶಾಲ್ ಬಾರ್ ಆ್ಯಂಡ್ ರೆಸ್ಟೊರೆಂಟ್‌ಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಎಲ್ಲ ವರ್ಗದ ಆಹಾರ ತಯಾರಕರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಪರವಾನಗಿ ಪರಿಶೀಲನೆಗೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗುವುದು. ನೋಂದಣಿ, ಪರವಾನಿಗೆ ಪಡೆಯದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.