ಬೆಂಗಳೂರು: ರಾಜ್ಯಗಳ ತೆರಿಗೆ ಹಂಚಿಕೆಗೆ ಸಂಬಂಧಿಸಿ ಮಾನದಂಡಗಳ ಪರಿಷ್ಕರಿಸುವ ಕುರಿತು ಕರ್ನಾಟಕ ಸರ್ಕಾರ ನೀಡಿರುವ ಸಲಹೆಗಳ ಪರಿಗಣಿಸಲು ಸಿದ್ಧವಿದ್ದೇವೆಂದು 16ನೇ ಹಣಕಾಸು ಆಯೋಗವು ಗುರುವಾರ ಹೇಳಿದೆ.
ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿರುವ 16ನೇ ಹಣಕಾಸು ಆಯೋಗವು ಗುರುವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿತು.
ಸಭೆ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಅರವಿಂದ ಪನಗಾರಿಯಾ ಅವರು, 15ನೇ ಹಣಕಾಸು ಆಯೋಗವು ನಿಗದಿಪಡಿಸಿದ ರಾಜ್ಯದ ತಲಾ ಆದಾಯದ ಅಂತರಕ್ಕೆ ನೀಡಲಾದ ಶೇ.45 ವೇಟೇಜ್ ಅನ್ನು ಶೇ.25 ಕ್ಕೆ ಇಳಿಸಬೇಕು ಎಂದು ಕರ್ನಾಟಕ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾಪದ ಹಿಂದಿರುವ ಮನೋಭಾವವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಈ ಸಂಬಂಧ ಮಾತುಕತೆಗಳು ನಡೆಯುತ್ತಿವೆ. ಆದರೆ, ಅಂತಿಮ ನಿರ್ಧಾರಗಳಾಗಿಲ್ಲ ಎಂದು ಹೇಳಿದರು.
ರಾಜ್ಯಗಳು ಕೆಲ ತೆರಿಗೆಗಳನ್ನು ಸಂಗ್ರಹ ಮಾಡುತ್ತವೆ. ಆದರೆ ಕೇಂದ್ರ ಸರಕಾರ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡುತ್ತದೆ. ಕೇಂದ್ರ ಸರಕಾರವು ತಾನು ಸಂಗ್ರಹಿಸಿರುವ ತೆರಿಗೆಯ ಪಾಲನ್ನು ರಾಜ್ಯಗಳಿಗೆ ಆದ್ಯತೆ ಮೇಲೆ ಹಂಚಲು ಸಹಕಾರಿಯಾಗುವಂತೆ ಹಣಕಾಸು ಆಯೋಗವು ಕೆಲಸ ಮಾಡುತ್ತದೆ. ಇದರಲ್ಲಿ ವಿಶೇಷ ಅನುದಾನಗಳು ಒಳಗೊಂಡಿರುತ್ತದೆ.
ಸಭೆಯಲ್ಲಿ ಮುಖ್ಯಮಂತ್ರಿ, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ರಾಜ್ಯ ಸರ್ಕಾರವು ಉತ್ತಮ ರೀತಿಯಲ್ಲಿ ತನ್ನ ಪ್ರಸ್ತಾವನೆಯನ್ನು ನಮಗೆ ಸಲ್ಲಿಸಿದೆ. ತೆರಿಗೆ ಪಾಲನ್ನು ಹೇಗೆ ಹಂಚಿಕೆ ಮಾಡಬೇಕು, ಪ್ರಾಕೃತಿಕ ವಿಕೋಪಕ್ಕೆ ಪರಿಹಾರ ನೀಡಲು ವಿಶೇಷ ಅನುದಾನ ನೀಡಬೇಕು, ತೆರಿಗೆ ಪಾಲನ್ನು ಹಂಚಿಕೆ ಮಾಡುವಾಗ ಹೆಚ್ಚು ತೆರಿಗೆ ನೀಡುವಂತಹ ರಾಜ್ಯಗಳ ಪಾಲನ್ನು ಹೆಚ್ಚಿಸಬೇಕು ಎಂದು ರಾಜ್ಯ ಸರಕಾರವು ಬೇಡಿಕೆ ಇಟ್ಟಿದೆ. ಅಲ್ಲದೇ, ತನ್ನ ಬೇಡಿಕೆಗಳಿಗೆ ಕಾರಣಗಳನ್ನು ನೀಡುವ ಮೂಲಕ ವಿಭಿನ್ನವಾಗಿ ತನ್ನ ಪ್ರಸ್ತಾವನೆ ನಮ್ಮ ಮುಂದೆ ಇಟ್ಟಿದೆ. ಸಾಂಪ್ರದಾಯಿಕ ವಿಧಾನದ ಬದಲಾಗಿ ಇಂದಿನ ಸಂದರ್ಭಕ್ಕೆ ಅನುಗುಣವಾಗಿ ತೆರಿಗೆ ಹಂಚಿಕೆಯ ಸ್ವರೂಪವನ್ನು ಬದಲಾಯಿಸಬೇಕು ಎಂಬ ಸಲಹೆಯನ್ನು ನೀಡಿದೆ. ಭೌತಿಕ ಕೊಡುಗೆ, ಜಿಎಸ್‍ಡಿಪಿ ಆಧಾರದಲ್ಲಿ ರಾಜ್ಯಗಳಿಗೆ ಅನುದಾನ ಸಿಗಬೇಕು ಎಂಬ ಪಸ್ತಾವನೆಯೂ ಬಂದಿದೆ.
ಹಣಕಾಸು ಆಯೋಗವು ದೇಶದ ಎಲ್ಲ ರಾಜ್ಯಗಳಿಗೂ ಭೇಟಿ ನೀಡಿ, ಅಲ್ಲಿನ ಸರಕಾರಗಳ ಅಭಿಪ್ರಾಯವನ್ನು ಸಂಗ್ರಹಿಸಲಿದೆ. ಆನಂತರ ರಾಜ್ಯಗಳ ಪ್ರಸ್ತಾವನೆಗಳ ಬಗ್ಗೆ ಆಂತರಿಕವಾಗಿ ಚರ್ಚೆಗಳನ್ನು ನಡೆಸಿ, ತೀರ್ಮಾನ ಕೈಗೊಂಡು ಕೇಂದ್ರ ಸರಕಾರಕ್ಕೆ ಶಿಫಾರಸ್ಸುಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.
ನಗರೀಕರಣ ಹೆಚ್ಚಾಗುತ್ತಿದೆ. ಶಿಕ್ಷಣ ಸೇರಿದಂತೆ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ಕೊಡುವ ಅಗತ್ಯವಿದೆ. ರಾಜ್ಯಗಳು ಹೆಚ್ಚಿನ ತೆರಿಗೆ ಪಾಲನ್ನು ಕೇಳುತ್ತಿವೆ. ನಾವು ನಮ್ಮದೇ ಆದ ರೀತಿಯಲ್ಲಿ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ರಾಜ್ಯಗಳಿಗೆ ಹೆಚ್ಚಿನ ಶಕ್ತಿ ತುಂಬಲು ನಾವು ಮುಕ್ತವಾಗಿದ್ದೇವೆ ಎಂದು ಹೇಳಿದರು.
ಬಳಿಕ ಕೇಂದ್ರ ಸರಕಾರವು ಸಂಗ್ರಹ ಮಾಡುವ ಸೆಸ್ ಹಾಗೂ ಸರ್‍ಚಾರ್ಜ್‍ಗಳಲ್ಲಿ ರಾಜ್ಯಗಳಿಗೆ ಪಾಲು ಸಿಗುತ್ತಿಲ್ಲ. ಆದುದರಿಂದ, ಈ ಸಂಬಂಧ ಕೇಂದ್ರದ ನಿಲುವು ಬದಲಾಗಬೇಕು ಎಂದು ರಾಜ್ಯ ಸರಕಾರ ಪ್ರಸ್ತಾಪಿಸಿರುವ ಅಂಶದ ಕುರಿತು ಪ್ರತಿಕ್ರಿಯಿಸಿ, ಈ ಹಂತದಲ್ಲಿ ನಾವು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಕಷ್ಟವಾಗುತ್ತದೆ. ಕೇಂದ್ರ ಸರಕಾರವು ತನ್ನ ಆದಾಯ ಹೆಚ್ಚಿಸಲು ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ನಾವು ಈ ಸಂಬಂಧ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದರು.
15ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ ಸುಮಾರು 79,770 ಕೋಟಿ ರೂ.ಗಳಷ್ಟು ನಷ್ಟ ಆಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ. ಅದಕ್ಕೆ ಏನಾದರೂ ಪರಿಹಾರ ಕೊಡಲು ಅವಕಾಶವಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜ್ಯ ಸರಕಾರ ನಮಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಆದರೆ, ಹಿಂದಿನ ನಷ್ಟಕ್ಕೆ ಈಗ ಪರಿಹಾರ ಕೊಡುವ ವ್ಯವಸ್ಥೆ ಇಲ್ಲ. ಸೆಸ್ ಹಾಗೂ ಸರ್‍ಚಾರ್ಜ್ ಬಗ್ಗೆ ಹಿಂದಿನ ಹಣಕಾಸು ಆಯೋಗವು ತಿದ್ದುಪಡಿಗಳನ್ನು ಮಾಡಲು ಯಾವುದೆ ಶಿಫಾರಸ್ಸು ಮಾಡಿಲ್ಲ. ಆದುದರಿಂದ, ಈ ವಿಚಾರದ ಬಗ್ಗೆ ಸದ್ಯದ ಪರಿಸ್ಥಿತಿಯಲ್ಲಿ ಮಾತನಾಡುವುದಿಲ್ಲ. ನಾವು ಅರ್ಥಶಾಸ್ತ್ರ ಮತ್ತು ರಾಜಕೀಯದ ನಿರ್ಬಂಧಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.