ಕಲಬುರಗಿ: ಸೋಮವಾರ ಸಂಜೆ 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ಮಂಗಳವಾರ ಸಂಪೂರ್ಣ ಬಂದ್ ಆಚರಿಸಲಾಯಿತು.
ಯಡ್ರಾಮಿ ಪೊಲೀಸರು ಆರೋಪಿ ಖಾಜಾಸಾಬ್ ನನ್ನು ಬಂಧಿಸಿದ್ದಾರೆ. ಮಂಗಳವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಂತ್ರಸ್ತೆ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ವಿವಿಧ ಸ್ಥಳೀಯ ಸಂಘಟನೆಗಳು ನೀಡಿದ ಬಂದ್ ಕರೆಗೆ ಬೆಂಬಲ ಸೂಚಿಸಿ ಪಟ್ಟಣದ ಎಲ್ಲಾ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಸಂಸ್ಥೆಗಳು, ಶಾಲಾ-ಕಾಲೇಜುಗಳು ಮುಚ್ಚಿದ್ದವು. ಶಾಲೆಗೆ ನೀಡಿರುವ ಅನುಮತಿಯನ್ನು (ಸರ್ಕಾರಿ ಮಾನ್ಯತೆ) ರದ್ದುಪಡಿಸಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಂಗಳವಾರ ಕಲಬುರಗಿಯಲ್ಲಿದ್ದ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಯಡ್ರಾಮಿಗೆ ಧಾವಿಸಿ ಸಂತ್ರಸ್ತರಿಗೆ 2.5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು. ರಾಜ್ಯ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಯಡ್ರಾಮಿ ತಹಶೀಲ್ದಾರ್ ಶಶಿಕಲಾ ಪಡಗಟ್ಟಿ ಮತ್ತಿತರ ಅಧಿಕಾರಿಗಳು ಪ್ರತಿಭಟನಾಕಾರರನ್ನು ಭೇಟಿ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರ ಸೂಚನೆಯಂತೆ ಶಾಲೆಗೆ ನೀಡಿರುವ ಅನುಮತಿಯನ್ನು ಶೀಘ್ರದಲ್ಲಿಯೇ ರದ್ದುಪಡಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೂರ್ಯಕಾಂತ್ ಮದನಿದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.