ಬೆಂಗಳೂರು: ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾಗದಿದ್ದರೆ ನಾಳೆಯೇ ದರ್ಶನ್ ಸಾಯುತ್ತಾರೆ, ನಾಳೆ ಬೆಳಗ್ಗೆ ಲಕ್ವ ಹೊಡೆಯುತ್ತದೆ ಎಂದು ಹೇಳಿ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದು 5 ವಾರ ಕಳೆದರೂ ಇನ್ನೂ ಚಿಕಿತ್ಸೆ ಪಡೆದಿಲ್ಲ. ಈ ಮೂಲಕ ನ್ಯಾಯಾಲಯದ ಅನುಕಂಪವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ದರ್ಶನ್ ಅವರಿಗೆ ನೀಡಲಾಗಿರುವ ಮಧ್ಯಂತರ ಜಾಮೀನು ರದ್ದುಪಡಿಸಬೇಕೆಂದು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಬಲವಾಗಿ ವಾದ ಮಂಡಿಸಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ, ಆರ್ ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ, ಪ್ರದೋಶ್ ಎಸ್. ರಾವ್ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯದ ಏಕಸದಸ್ಯ ಪೀಠ ಶುಕ್ರವಾರ ಮುಂದುವರೆಸಿತು.
ಈ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ಅವರು ಸರ್ಕಾರದ ಪರವಾಗಿ ಬಲವಾಗಿ ವಾದ ಮಂಡಿಸಿದರು.
ಬೆನ್ನುನೋವಿಗೆ ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಗಾಗದಿದ್ದರೆ ನಾಳೆಯೇ ದರ್ಶನ್ ಸಾಯುತ್ತಾರೆ. ಪಾರ್ಶ್ವವಾಯುವಿಗೆ ಒಳಗಾಗಬಹುದು ಎಂದು ನಟ ಹೇಳಿಕೊಂಡಿದ್ದರು, ಆದರೆ, ಮಧ್ಯಂತರ ಜಾಮೀನು ಪಡೆದು 5 ವಾರಗಳು ಕಳೆದರೂ, ರಕ್ತದೊತ್ತಡದಲ್ಲಿನ ವ್ಯತ್ಯಾಸವನ್ನು ಉಲ್ಲೇಖಿಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ರಕ್ತದೊತ್ತಡ ಸಮಸ್ಯೆಯನ್ನು ಒಂದು ಅಥವಾ 2 ದಿನದೊಳಗೆ ನಿಯಂತ್ರಣಕ್ಕೆ ತರಬಹುದು.
ಅಕ್ಟೋಬರ್ 30 ರಂದು ಮಧ್ಯಂತರ ಜಾಮೀನು ಪಡೆದ ಐದು ವಾರಗಳ ನಂತರವೂ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಕಡೆಯಿಂದ ನವೆಂಬರ್ 6 ಮತ್ತ 21ರಂದು 2 ವೈದ್ಯಕೀಯ ವರದಿಗಳನ್ನು ನೀಡಲಾಗಿದೆ. ಜಾಮೀನಿನ ಮೇಲೆ ದರ್ಶನ್ ಬಂದ ವಾರದಲ್ಲಿ ಮೊದಲ ವರದಿ ನೀಡಲಾಗಿದೆ. ನವೆಂಬರ್ 6ರ ವರದಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವವರೆಗೆ ದರ್ಶನ್ ಅವರು ಮಧ್ಯಂತರ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೆಲ್ಲವೂ ತಾತ್ಕಾಲಿಕ ಕ್ರಮವಾಗಿದ್ದು, ಶಸ್ತ್ರಚಿಕಿತ್ಸೆ ಬಾಕಿ ಇದೆ. ಇದಕ್ಕಾಗಿ ಅವರನ್ನು ಅಣಿಗೊಳಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ನವೆಂಬರ್ 21ರ ವರದಿಯಲ್ಲಿ ದರ್ಶನ್ ರಕ್ತದೊತ್ತಡದಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಅವರನ್ನು ಶಸ್ತ್ರಚಿಕಿತ್ಸೆಗೆ ಅಣಿಗೊಳಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆಯಾದ ಬಳಿಕ ಅವರು ಎಷ್ಟು ದಿನಗಳಲ್ಲಿ ಚೇತರಿಸಿಕೊಳ್ಳಬಹುದು ಎಂಬುದನ್ನು ಆನಂತರ ಅಂದಾಜಿಸಲಾಗುವುದು ಎಂದು ತಿಳಿಸಲಾಗಿದೆ. ಇದಕ್ಕೆ ಪೂರಕವಾಗಿ ರಕ್ತದೊತ್ತಡದಲ್ಲಿನ ಏರುಪೇರಿಗೆ ಸಂಬಂಧಿಸಿದ ವರದಿಗಳನ್ನು ಸೇರಿಸಲಾಗಿದೆ.
ನವೆಂಬರ್ 15ರ ನಂತರ ದರ್ಶನ್ ಬಿಪಿ 140, 150 ಇದೆ ಎಂದು ತಿಳಿಸಲಾಗಿದೆ. ಬಿಪಿಯಲ್ಲಿ ವ್ಯತ್ಯಯವಾದರೆ, ಶಸ್ತ್ರಚಿಕಿತ್ಸಕರ ಪ್ರಕಾರ, ಒಂದು ಅಥವಾ ಎರಡು ದಿನಗಳಲ್ಲಿ ಅದನ್ನು ಸಾಮಾನ್ಯ ಸ್ಥಿತಿಗೆ ತರಲು 2.22 ರೂಪಾಯಿಗಳ ಒಂದು ಸಣ್ಣ ಟ್ಯಾಬ್ಲೆಟ್ ಸಾಕು. ತುರ್ತು ಸಂದರ್ಭಗಳಲ್ಲಿ ಸಮಯ ಕಳೆದುಕೊಳ್ಳದೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಆದರೆ, ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಿ 5 ವಾರಗಳಾದರೂ ವೈದ್ಯರು ಇನ್ನೂ ಅವರನ್ನು ಶಸ್ತ್ರಚಿಕಿತ್ಸೆಗೆ ಅಣಿಗೊಳಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಐದು ವಾರಗಳಿಂದ ವೈದ್ಯರು ಏನು ಮಾಡುತ್ತಿದ್ದಾರೆ? ಹೀಗಾಗಿ, ಮಧ್ಯಂತರ ಜಾಮೀನಿನಲ್ಲಿ ದರ್ಶನ್ ಉಳಿಯಲು ಅರ್ಹರಲ್ಲ. ಅವರು ಶರಣಾಗಬೇಕು. ಆನಂತರ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಬಹುದು. ಮುಂದಿನ ವಾರಕ್ಕೆ ಆರು ವಾರ ಮುಗಿಯಲಿದೆ ಎಂದು ಹೇಳಿದರು.
ಈ ನಡುವೆ ವಾದ ಮಂಡಿಸಿದ ದರ್ಶನ್ ಪರ ವಕೀಲರು, ಮೃತ ರೇಣುಕಾಸ್ವಾಮಿ ಆರೋಪಿ ನಂ.1 ಪವಿತ್ರ ಗೌಡ ಅವರಿಗೆ Instagram ಖಾತೆಯ ಮೂಲಕ ಆತನ ಗುಪ್ತಾಂಗದ ಚಿತ್ರಗಳನ್ನು ಕಳುಹಿಸಿದ್ದ ಎಂದು ವಾದಿಸಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ಸರ್ಕಾರದ ಪರವಕೀಲರು, ಆತನ ಖಾತೆಯನ್ನು ಬ್ಲಾಕ್ ಮಾಡುವ ಅಥವಾ ರಿಪೋರ್ಟ್ ಮಾಡುವ ಆಯ್ಕೆ ನಿರ್ಬಂಧಿಸುವ ಅಥವಾ ವರದಿ ಮಾಡುವ ಆಯ್ಕೆಗಳನ್ನು Instagram ಒದಗಿಸುತ್ತದೆ ಆದರೆ, ಆರೋಪಿ ಈ ಆಯ್ಕೆಯನ್ನು ಬಳಸಿಲ್ಲ. ಮೃತ ವ್ಯಕ್ತಿಗೆ ಆರೋಪಿ ನಂ.3ರ ಮೂಲಕ ಸಂದೇಶ ಕಳುಹಿಸಿ, ಆರೋಪಿ ನಂ.3 ತಾನೇ ಪವಿತ್ರಾ ಗೌಡ ಎಂದು ನಂಬಿಸಿ ರೇಣುಕಾಸ್ವಾಮಿ ಜೊತೆಗೆ ಚಾಟ್ ಮಾಡಿದ್ದಾನೆ. ಹತ್ಯೆ ಮಾಡುವ ಉದ್ದೇಶ ಇರದಿದ್ದರೆ, ಆತನನ್ನು ನಿರ್ಬಂಧಿಸಬಹುದಿತ್ತು ಎಂದು ಹೇಳಿದರು, ಈ ವೇಳೆ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.