ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಖಾಸಗಿ ಆಸ್ಪತ್ರೆಯ ಶುಶ್ರೂಷಕಿ (ನರ್ಸ್) ಮೇಲೆ ಅತ್ಯಾಚಾರವೆಸಗಿದ ಆರೋಪಿ ತನ್ನ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, 'ಮತ್ತೇರಿಸುವ ಔಷಧ ನೀಡಿ ಅತ್ಯಾಚಾರ ಎಸಗಿದ್ದಲ್ಲದೆ, ವಿಡಿಯೊ ಚಿತ್ರೀಕರಣ ಮಾಡಿಕೊಂಡು ಬೆದರಿಸಿ, ಜಾತಿ ನಿಂದನೆ ಮಾಡಿದ್ದಾನೆ ಎಂದು ಖಾಸಗಿ ಆಸ್ಪತ್ರೆಯ ನರ್ಸ್ ಆಗಿ ಕೆಲಸ ಮಾಡುತ್ತಿರುವ ಯುವತಿ ಆರೋಪಿಸಿದ್ದಾಳೆ. ಈ ಸಂಬಂಧ ಆಂಧ್ರ ಪ್ರದೇಶದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
26 ವರ್ಷದ ಯುವತಿ ನೀಡಿರುವ ದೂರಿನ ಮೇರೆಗೆ ಯುವಕ ಅಕ್ಕಿ ಲಕ್ಷ್ಮೀರೆಡ್ಡಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಕೃತ್ಯ ನಡೆದ ಸ್ಥಳ ಜೆ.ಸಿ.ನಗರ ವ್ಯಾಪ್ತಿಗೆ ಬರುವುದರಿಂದ ಪ್ರಕರಣದ ತನಿಖೆಯನ್ನು ಜೆ.ಸಿ.ನಗರ ಉಪವಿಭಾಗಕ್ಕೆ ವರ್ಗಾಯಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ,'ನಗರದ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿ ಆಗಿರುವ ಯುವತಿ, 2019ರಲ್ಲಿ ಆರ್.ಟಿ. ನಗರದ ಖಾಸಗಿ ಬ್ಯಾಂಕ್‌ವೊಂದರ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಅಕ್ಕಿ ಲಕ್ಷ್ಮೀರೆಡ್ಡಿಯ ಪರಿಚಯವಾಗಿತ್ತು.
2019ರ ನವೆಂಬರ್‌ನಲ್ಲಿ ತನ್ನ ಸಹೋದರಿಯ ಹುಟ್ಟುಹಬ್ಬದ ಕಾರ್ಯಕ್ರಮವಿದೆ ಎಂದು ಆರ್.ಟಿ. ನಗರದ ರೆಸಿಡೆನ್ಸಿಯೊಂದಕ್ಕೆ ಆಹ್ವಾನಿಸಿದ್ದ ಆರೋಪಿ, ಚಹಾದಲ್ಲಿ ಮತ್ತು ಬರುವ ಔಷಧಿ ಬೆರೆಸಿ, ಕುಡಿಸಿ ಅತ್ಯಾಚಾರ ಮಾಡಿದ್ದಾನೆ. ಕೃತ್ಯದ ವಿಡಿಯೊ ಚಿತ್ರೀಕರಿಸಿಕೊಂಡು, ಬೆದರಿಸಿ ನಿರಂತರವಾಗಿ ಲೈಂಗಿಕ ಶೋಷಣೆ ಮಾಡಿದ್ದಾನೆ’ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ ಆತ ‘ನನ್ನ ಜಾತಿ ಹಾಗೂ ತಾಯಿಯನ್ನು ನಿಂದಿಸಿದ್ದಾನೆ. ಮನೆಯಲ್ಲಿದ್ದ ಅಂಬೇಡ್ಕರ್ ಅವರ ಫೋಟೊ ತೆಗೆದುಹಾಕುವಂತೆ ಕಿರುಕುಳ ನೀಡಿದ್ದಾನೆ. ನವೆಂಬರ್‌ನಲ್ಲಿ ತನ್ನನ್ನು ಖಾಸಗಿ ಹೋಟೆಲ್‌ಗೆ ಕರೆದೊಯ್ದು ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮತ್ತೆ ನವೆಂಬರ್ 30ರಂದು ನನ್ನನ್ನು ಭೇಟಿಯಾಗಿದ್ದ ಆರೋಪಿ, ಮೊಬೈಲ್ ವಾಲ್‌ಪೇಪರ್‌ನಲ್ಲಿದ್ದ ಅಂಬೇಡ್ಕರ್ ಅವರ ಫೋಟೊ ತೆಗೆದುಹಾಕುವಂತೆ ಬೆದರಿಸಿ ಮೊಬೈಲ್ ಒಡೆದು ಹಾಕಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಹರಿದುಹಾಕಿ ಸಾಯಿಸುತ್ತೇನೆ' ಎಂದು ಬೆದರಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯುವತಿ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಅಕ್ಕಿ ಲಕ್ಷ್ಮೀರೆಡ್ಡಿ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯ ಗೌರವಕ್ಕೆ ಧಕ್ಕೆ, ಕ್ರಿಮಿನಲ್ ಬೆದರಿಕೆ ಮತ್ತು ಉದ್ದೇಶಪೂರ್ವಕ ಅವಮಾನದ ಆರೋಪ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ, 1989 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತ ಯುವತಿ ದೂರು ನೀಡುತ್ತಿದ್ದಂತೆ ಆರೋಪಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.