ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಅವರ ಮಧ್ಯಂತರ ಜಾಮೀನು ಅವಧಿಯನ್ನು ಹೈಕೋರ್ಟ್ ಸೋಮವಾರ ವಿಸ್ತರಣೆ ಮಾಡಿದೆ.
ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಾಂಕದವರೆಗೂ ಮಧ್ಯಂತರ ಜಾಮೀನು ವಿಸ್ತರಣೆ ಮಾಡಿ ಹೈಕೋರ್ಟ್ ಆದೇಶ ನೀಡಿದೆ.
ಇಂದು ಹೈಕೋರ್ಟ್ನಲ್ಲಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ವಾದ ಮಂಡಿಸಿದ್ದು, ಎಸ್ ಪಿಪಿ ಪ್ರಸನ್ನ ಕುಮಾರ್ ಕೂಡ ಪ್ರತಿವಾದ ಮಂಡಿಸಿದರು. ಸುದೀರ್ಘ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ದಿನಾಂಕ ಘೋಷಿಸದೆ ತೀರ್ಪು ಕಾಯ್ದಿರಿಸಿದ್ದಾರೆ. ಜೊತೆಗೆ ಆದೇಶ ಬರುವವರೆಗೂ ನಟ ದರ್ಶನ್ ವೈದ್ಯಕೀಯ ಜಾಮೀನು ಅವಧಿ ವಿಸ್ತರಿಸಿದ್ದಾರೆ.
ಡಿಸೆಂಬರ್ 11ಕ್ಕೆ ನಟ ದರ್ಶನ್ ಅವರ ಶಸ್ತ್ರ ಚಿಕಿತ್ಸೆಗೆ ದಿನಾಂಕ ನಿಗದಿ ಆಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಆದ್ದರಿಂದ ಅವರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ರೆಗ್ಯುಲರ್ ಬೇಲ್ ವಿಚಾರಣೆಯ ವಾದ-ಪ್ರತಿವಾದ ಮುಗಿದಿದೆ. ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ. ಆದೇಶ ಬರುವ ತನಕ ದರ್ಶನ್ ಅವರ ಮಧ್ಯಂತರ ಜಾಮೀನು ಅವಧಿ ಮುಂದುವರಿಯಲಿದೆ.