ರಾಜ್ಯ

News headlines 11-12-24 | ಎಸ್ಎಂ ಕೃಷ್ಣ ಪಂಚಭೂತಗಳಲ್ಲಿ ಲೀನ; ಮುರುಡೇಶ್ವರ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ; ಟೆಕ್ಕಿ ಆತ್ಮಹತ್ಯೆ: FIR ದಾಖಲು!

ಪಂಚಭೂತಗಳಲ್ಲಿ ಎಸ್ಎಂ ಕೃಷ್ಣ ಲೀನ. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರ

ದೇಶ ಕಂಡ ಅಪರೂಪದ ರಾಜಕಾರಣಿ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಹುಟ್ಟುರಾದ ಸೋಮನಹಳ್ಳಿಯಲ್ಲಿಂದು ನಡೆಯಿತು. ಮೃತರ ಗೌರವಾರ್ಥವಾಗಿ ಮಂಡ್ಯ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಗೌರವ ಪೂರ್ವಕವಾಗಿ ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಅವರಿಗೆ ಸಿಎಂ ಸಿದ್ದರಾಮಯ್ಯ ಹಸ್ತಾಂತರಿಸಿದರು. ವೈದಿಕ ಪಂಡಿತರಾದ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ವಿಧಿವಿಧಾನಗಳ ಬಳಿಕ ಮೊಮ್ಮಗ ಅಮರ್ತ್ಯ ಹೆಗ್ಡೆ, ತಮ್ಮ ಅಜ್ಜನ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ರಾಜಕೀಯ ಮುತ್ಸದಿ ಎಸ್ಎಂ ಕೃಷ್ಣ ಪಂಚಭೂತಗಳಲ್ಲಿ ಲೀನರಾದರು.

ಮುರುಡೇಶ್ವರ ದುರಂತ: ಮೃತ ವಿದ್ಯಾರ್ಥಿನಿಯರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ದುರಂತ ಸಂಭವಿಸಿದ್ದು ಕೋಲಾರದ ವಸತಿ ಶಾಲೆಯೊಂದರ 9ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲಾಗಿದ್ದರು. ಈ ದುರಂತಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಯ ಆರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಕೋಲಾರದ ಮುಳಬಾಗಿಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳು ಮತ್ತು ಆರು ಶಿಕ್ಷಕರ ತಂಡ ಮುರುಡೇಶ್ವರಕ್ಕೆ ತೆರಳಿತ್ತು. ಜೀವರಕ್ಷಕರ ಎಚ್ಚರಿಕೆಯ ಹೊರತಾಗಿಯೂ ವಿದ್ಯಾರ್ಥಿನಿಯರು ನೀರಿಗೆ ಇಳಿದಿದ್ದು ಈ ವೇಳೆ ಏಳು ವಿದ್ಯಾರ್ಥಿಗಳು ಸಮುದ್ರದ ಅಲೆಗಳಿಗೆ ಸಿಕ್ಕಿ ಕೊಚ್ಚಿ ಹೋಗಿದ್ದರು. ಈ ವೇಳೆ ಮೂವರು ವಿದ್ಯಾರ್ಥಿಗಳನ್ನು ಜೀವರಕ್ಷಕರು ಸಹಾಯದಿಂದ ರಕ್ಷಿಸಲಾಗಿತ್ತು. ಆದರೆ ನಾಲ್ವರು ಸಮುದ್ರ ಪಾಲಾಗಿದ್ದರು. ದುರಂತದ ಬಗ್ಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೃತ ವಿದ್ಯಾರ್ಥಿನಿಯರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಘೋಷಿಸಿದ್ದಾರೆ.

ವಯನಾಡಿನಲ್ಲಿ ನಿರಾಶ್ರಿತರಿಗೆ ಮನೆ ನಿರ್ಮಿಸಲು ಸಿಎಂ ಸಿದ್ದು ಭೂಮಿಗೆ ಬೇಡಿಕೆ: ಬಿಜೆಪಿ ಆಕ್ರೋಶ

ವಿನಾಶಕಾರಿ ಭೂಕುಸಿತದಿಂದ ಹಾನಿಗೊಳಗಾದ ಕುಟುಂಬಗಳಿಗೆ ವಯನಾಡಿನಲ್ಲಿ ಮನೆ ನಿರ್ಮಿಸಲು ಭೂಮಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ವಿಚಾರಕ್ಕೆ ಇದೀಗ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ರಾಜ್ಯದ ಜನರಿಗಾಗಿ ಕೆಲಸ ಮಾಡ್ತಿದಿರೋ ಅಥವಾ ಗಾಂಧಿ ಕುಟುಂಬಕ್ಕಾಗಿ ಮಾಡ್ತಿದಿರೋ ಎಂಬುದನ್ನು ತಿಳಿಯಬೇಕಾಗಿದೆ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿನ ಕೆಲವೊಂದು ಮೂಲಭೂತ ಸಮಸ್ಯೆಗಳನ್ನು ಪ್ರಸ್ತಾಪಿಸಿರುವ ವಿಜಯೇಂದ್ರ, ರಾಜ್ಯದ ಜನರು, ಅಭಿವೃದ್ಧಿಗೆ ಆದ್ಯತೆ ನೀಡುವ ನಾಯಕತ್ವ ಬೇಕಾಗಿದೆ. ರಾಜಕೀಯ ಓಲೈಕೆಗಾಗಿ ರಾಜ್ಯದ ಅಗತ್ಯಗಳನ್ನು ಬದಿಗೊತ್ತುವ ನಾಯಕತ್ವ ಬೇಡ ಎಂದು ಕಿಡಿಕಾರಿದ್ದಾರೆ. ವಯನಾಡಿಗೆ ಕಾಂಗ್ರೆಸ್ ನ ಪ್ರಿಯಾಂಕಾ ವಾದ್ರಾ ಸಂಸದರಾಗಿದ್ದಾರೆ.

ಬೆಂಗಳೂರು ಟೆಕ್ಕಿ ಆತ್ಮಹತ್ಯೆ: ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಎಫ್ಐಆರ್

ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಟೆಕ್ಕಿಯ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 24 ಪುಟಗಳ ಆತ್ಮಹತ್ಯೆ ಪತ್ರ ಬರೆದಿಟ್ಟು ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಸುಭಾಷ್ ಸಹೋದರ ವಿಕಾಸ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅತುಲ್ ಪತ್ನಿ ನಿಕಿತಾ ಸಿಂಘಾನಿಯಾ, ಅತ್ತೆ ನಿಶಾ, ಸೋದರ ಮಾವ ಅನುರಾಗ್, ಚಿಕ್ಕಪ್ಪ ಸುಶೀಲ್ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅತುಲ್ ಸುಭಾಷ್ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಲು ನಾಲ್ವರು 3 ಕೋಟಿ ರೂ.ಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಬಳ್ಳಾರಿ ಬಳಿಕ ರಾಯಚೂರಿನಲ್ಲೂ ಬಾಣಂತಿಯರ ಸಾವು ಪ್ರಕರಣ ವರದಿ

ಬಳ್ಳಾರಿಯ ಬೀಮ್ಸ್ ನಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಇದರ ಬೆನ್ನಲ್ಲೇ ಇದೀಗ ರಾಯಚೂರು ಹಾಗೂ ಚಿತ್ರದುರ್ಗದಲ್ಲಿಯೂ ಬಾಣಂತಿಯರ ಸಾವು ಪ್ರಕರಣಗಳು ವರದಿಯಾಗಿವೆ. ಕಳೆದ ಅಕ್ಟೋಬರ್ ನಲ್ಲಿ ಸಿಂಧನೂರಿನ ತಾಲೂಕ್ ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಚಂದ್ರಕಲಾ, ರೇಣುಕಮ್ಮ, ಮೌಸಮಿ ಮಂದಾಲ್ ಮತ್ತು ಚನ್ನಮ್ಮ ಎಂದು ಗುರುತಿಸಲಾಗಿದೆ. ಹೆರಿಗೆಯಾದ 300 ಗರ್ಭಿಣಿಯರ ಪೈಕಿ ಏಳು ಮಂದಿ ಗಂಭೀರ ಪರಿಸ್ಥಿತಿಗೆ ತೆರಳಿದ್ದರೆ, ಅವರ ಪೈಕಿ ನಾಲ್ವರು ಸಾವನ್ನಪ್ಪಿದ್ದರು. ಮತ್ತೊಂದೆಡೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಅಕ್ಟೋಬರ್ 30ರಂದು ರೋಜಾ ಎಂಬುವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಅದಾದ ಬಳಿಕ ರೋಜಾಗೆ ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾಗಲೇ ಮೃತಪಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕಾ ಮೇಲೆ ಭಾರತ ನಂಬಲಸಾಧ್ಯ ತೆರಿಗೆಯನ್ನು ವಿಧಿಸಿದ್ದು, ಇದು ವಿಶ್ವದಲ್ಲೇ ಅತ್ಯಧಿಕ: ಸುಂಕಾಸ್ತ್ರ ಕ್ರಮಕ್ಕೆ ಟ್ರಂಪ್ ಸಮರ್ಥನೆ

ನಿಮ್ಮ-ಭಾರತ ಸಂಬಂಧಕ್ಕೆ ನಮ್ಮ ತಕರಾರಿಲ್ಲ ಆದರೆ, ನಮ್ಮ ಬಾಂಧವ್ಯ ಗಟ್ಟಿಗೊಳಿಸೋಣ: ರಷ್ಯಾಗೆ ಪಾಕ್ ಮನವಿ

ಎರಡು ಗಂಟೆ ಮಳೆ - 20 ಕಿ.ಮೀ. ಟ್ರಾಫಿಕ್ ಜಾಮ್: ಮಿಲೇನಿಯಮ್ ಸಿಟಿ ನಗರಾಭಿವೃದ್ಧಿ ಟ್ರಿಪಲ್ ಎಂಜಿನ್ ಮಾದರಿ: BJP ಕಾಲೆಳೆದ ಕಾಂಗ್ರೆಸ್!

'ಸ್ವಾತಂತ್ರ್ಯ ಹೋರಾಟದಲ್ಲಿ ಯಾರ ಮನೆ ನಾಯಿ ಭಾಗವಹಿಸಿತ್ತೆಂದು ಬಹಿರಂಗ ಪಡಿಸಲಿ: ರಾಜ್ಯ ಸರ್ಕಾರದಲ್ಲಿ ಬಚ್ಚಲುಬಾಯಿ ಮಂತ್ರಿಗಳು!'

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ "ಐತಿಹಾಸಿಕ ನಿರ್ಧಾರ"; ಐದು ಪಾಲಿಕೆಗೆ ಆಯುಕ್ತರ ನೇಮಕ

SCROLL FOR NEXT