ಹಾಸನ: ಹಾಸನ ಜಂಕ್ಷನ್ ನಿಂದ 12 ಕಿ.ಮೀ ದೂರದಲ್ಲಿರುವ ಆಲೂರು ಜಂಕ್ಷನ್‌ನಲ್ಲಿ ಆದಾಯ ನಷ್ಟದ ಕಾರಣ ನೀಡಿ ರೈಲುಗಳ ನಿಲುಗಡೆ ರದ್ದುಗೊಳಿಸಿರುವ ನೈಋತ್ಯ ರೈಲ್ವೆ ನಿರ್ಧಾರದ ವಿರುದ್ಧ ವಿವಿಧ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 4 ರಿಂದ ಎಲ್ಲಾ ರೈಲುಗಳ ನಿಲುಗಡೆ ರದ್ದುಗೊಳಿಸಿದ ನೈರುತ್ಯ ರೈಲ್ವೆ ಅಧಿಕಾರಿಗಳ ಹಠಾತ್ ನಿರ್ಧಾರದಿಂದ ಸ್ಥಳೀಯರು ಮತ್ತು ವ್ಯಾಪಾರ ವರ್ಗ ಆತಂಕಗೊಂಡಿದೆ. ಅಧಿಕಾರಿಗಳು ತಮ್ಮ ನಿರ್ಧಾರವನ್ನು ಮರು ಪರಿಶೀಲಿಸದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ರಾಧಮ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಹೇಮಂತ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ರೈಲ್ವೆ ಇಲಾಖೆ ಒಂದು ತಿಂಗಳಿಗೆ 50,000 ಆದಾಯವನ್ನು ನಿರೀಕ್ಷಿಸಿತ್ತು. ಆದರೆ ಸಂಗ್ರಹವು ತುಂಬಾ ಕಳಪೆಯಾಗಿದೆ. 10,000 ಕೂಡ ದಾಟುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ದಶಕದ ಹಿಂದೆ ನಿರ್ಮಿಸಿದ ಆಲೂರು ಜಂಕ್ಷನ್ ಬಗ್ಗೆ ರೈಲ್ವೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಆಲೂರು ಮತ್ತು ಅಕ್ಕಪಕ್ಕದ ಗ್ರಾಮಗಳ ಜನರು ರೈಲು ಸೇವೆ ಪಡೆಯಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹಾಸನಕ್ಕೆ ತೆರಳಬೇಕು. ಅದೇ ರೀತಿ ಹಾಸನ ಜಂಕ್ಷನ್‌ನಲ್ಲಿ ಇಳಿದು ತಮ್ಮ ಊರುಗಳಿಗೆ ತೆರಳಲು ವಾಹನಗಳನ್ನೇ ಅವಲಂಬಿಸಬೇಕಾಗಿದೆ. ರಾತ್ರಿ ವೇಳೆ ಆಲೂರಿಗೆ ವಾಹನಗಳು ಸಿಗದ ಕಾರಣ ರಾತ್ರಿ ರೈಲುಗಳಲ್ಲಿ ಹಾಸನ ಜಂಕ್ಷನ್‌ಗೆ ಬಂದ ಪ್ರಯಾಣಿಕರು ಹಾಸನ ಜಂಕ್ಷನ್‌ನಲ್ಲಿ ರಾತ್ರಿ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ. ರೈಲ್ವೆ ಇಲಾಖೆಯು ಆಲೂರು ಜಂಕ್ಷನ್‌ನ ನೌಕರರಿಗೆ ಸಂಬಳ ಮತ್ತು ಸೌಲಭ್ಯಗಳಿಗಾಗಿ ಲಕ್ಷಗಳನ್ನು ಖರ್ಚು ಮಾಡುತ್ತಿದೆ ಎಂದು ಹೇಮಂತ್ ಕುಮಾರ್ ಹೇಳಿದರು.
ಈ ಸಂಬಂಧ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಹಾಗೂ ಸೋಮಣ್ಣ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಮಾಜಿ ಶಾಸಕ ಎಚ್‌ಕೆ ಕುಮಾರಸ್ವಾಮಿ ಹೇಳಿದರು.