ಡಿ.ಕೆ ಶಿವಕುಮಾರ್ 
ರಾಜ್ಯ

2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಗಾಂಧಿ ಭಾರತ ಕಾರ್ಯಕ್ರಮ ಮುನ್ನುಡಿ ಬರೆಯಬೇಕು: DK ಶಿವಕುಮಾರ್

ಇಂತಹ ಕಾರ್ಯಕ್ರಮ ಮತ್ತೆ ನಮ್ಮ ರಾಜ್ಯದಲ್ಲಿ ನಡೆಯುವಾಗ ನಾವು ಬದುಕಿರುತ್ತೇವೋ ಇಲ್ಲವೋ ಗೊತ್ತಿಲ್ಲ. ಯುವಕರಿಗೆ ಮತ್ತೆ ಆ ಪುಣ್ಯ ಸಿಗಬಹುದು.

ಬೆಳಗಾವಿ: 2028ಕ್ಕೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು 'ಗಾಂಧಿ ಭಾರತ' ಕಾರ್ಯಕ್ರಮ ಮುನ್ನುಡಿಯಾಗಬೇಕು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬೆಳಗಾವಿ ಅಧಿವೇಶನ ಶತಮಾನೋತ್ಸವ ಹಿನ್ನೆಲೆಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಅಂಗವಾಗಿ ಇದೇ ತಿಂಗಳು 26, 27ರಂದು ನಡೆಯಲಿರುವ ರಾಷ್ಟ್ರ ಮಟ್ಟದ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯನ್ನು ಶಿವಕುಮಾರ್ ಅವರು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆಸಿದರು.

ಈ ವೇಳೆ ಮಾತನಾಡಿದ ಅವರು, "ಗಾಂಧಿ ಭಾರತ ಕಾರ್ಯಕ್ರಮದ ಮೂಲಕ ಬೆಳಗಾವಿ ಇತಿಹಾಸ ಪುಟ ಸೇರುತ್ತಿದೆ. 26ರಂದು ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, 40 ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳು, 150 ಜನ ಸಂಸದರು, ಶಾಸಕರು ಹಾಗೂ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಮತ್ತೆ ಈ ಎಲ್ಲಾ ನಾಯಕರನ್ನು ಸೇರಿಸಿ ರಾಜ್ಯದಲ್ಲಿ ಯಾವಾಗ ಕಾರ್ಯಕ್ರಮ ಮಾಡುತ್ತೇವೋ ಗೊತ್ತಿಲ್ಲ" ಎಂದು ತಿಳಿಸಿದರು. "ಇಂತಹ ಕಾರ್ಯಕ್ರಮ ಮತ್ತೆ ನಮ್ಮ ರಾಜ್ಯದಲ್ಲಿ ನಡೆಯುವಾಗ ನಾವು ಬದುಕಿರುತ್ತೇವೋ ಇಲ್ಲವೋ ಗೊತ್ತಿಲ್ಲ. ಯುವಕರಿಗೆ ಮತ್ತೆ ಆ ಪುಣ್ಯ ಸಿಗಬಹುದು. ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಬೆಳಗಾವಿ ಅಧಿವೇಶನಕ್ಕೆ ಶತಮಾನ ತುಂಬಿದೆ. ನೂರು ವರ್ಷಗಳ ಬಳಿಕ ಮತ್ತೆ ಬೆಳಗಾವಿಯಲ್ಲಿ ನಾವು ಮತ್ತೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಮಾಡುತ್ತಿದ್ದೇವೆ" ಎಂದರು.

"ನಮ್ಮ ಕರ್ನಾಟಕದವರಾದ ಮಲ್ಲಿಕಾರ್ಜುನ ಖರ್ಗೆ ಅವರು ಗಾಂಧೀಜಿ ಅವರು ಸ್ವೀಕರಿಸಿದ್ದ ಹುದ್ದೆಯಲ್ಲಿ ಇದ್ದಾರೆ. ಈ ಸಂದರ್ಭದಲ್ಲಿ ಈ ಕಾರ್ಯಕ್ರಮ ಮಾಡುತ್ತಿರುವುದು ಮತ್ತೊಂದು ವಿಶೇಷ. ಖರ್ಗೆ ಅವರ ಪಾಲಿಗೆ ಇದು ಒಂದು ಸೌಭಾಗ್ಯವೂ ಹೌದು. ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲಾ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ" ಎಂದು ಮಾಹಿತಿ ನೀಡಿದರು.

ಬೆಳಗಾವಿಯಲ್ಲಿರುವ ಗಾಂಧಿ ಬಾವಿಯಲ್ಲಿ ನೀರು ತೆಗೆದುಕೊಂಡು ಇಲ್ಲಿನ ಜಾಗ ಸ್ವಚ್ಛ ಮಾಡಿ, ನಮ್ಮ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಈ ಜಾಗದಲ್ಲಿ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದು, ಇದೇ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ. ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಇದು ಕಾಂಗ್ರೆಸ್ ಪಕ್ಷದ ಶಕ್ತಿ" ಎಂದು ಹೇಳಿದರು.

"ಬೆಳಗಾವಿ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಹೆಚ್.ಕೆ ಪಾಟೀಲ್, ವೀರಪ್ಪ ಮೊಯ್ಲಿ, ಬಿ.ಎಲ್ ಶಂಕರ್ ಅವರ ನೇತೃತ್ವದ ಸಮಿತಿಯಿಂದ 'ಗಾಂಧಿ ಭಾರತ' ಕಾರ್ಯಕ್ರಮದ ರೂಪುರೇಷೆ ನಿರ್ಧರಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಈ ಸಮಿತಿ ಸರ್ಕಾರ ಹಾಗೂ ಪಕ್ಷದ ವತಿಯಿಂದ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಸಲಹೆ ನೀಡುತ್ತಿದೆ.

ಈ ಕಾರ್ಯಕ್ರಮಕ್ಕೆ ಎರಡು ಜಾಗ ಆಯ್ಕೆ ಮಾಡಿದ್ದೇವೆ. ಗಾಂಧಿ ಭವನದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಗಾಂಧಿ ಪ್ರತಿಮೆ ಉದ್ಘಾಟನೆಯಾಗಲಿದೆ. ಭದ್ರತೆ ದೃಷ್ಟಿಯಿಂದ ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾನ ಇರುವುದಿಲ್ಲ" ಎಂದರು.

"ಮರುದಿನ ಅಂದರೆ 27ರಂದು ಬೆಳಗ್ಗೆ 11 ಗಂಟೆಗೆ ಪಕ್ಷದ ಕಾರ್ಯಕರ್ತರ ಬೃಹತ್ ಸಭೆ ನಡೆಯಲಿದ್ದು, ರಾಜ್ಯದಾದ್ಯಂತ ಕಾರ್ಯಕರ್ತರು ಆಗಮಿಸಲಿದ್ದಾರೆ. ಪಂಚಾಯ್ತಿ ಮಟ್ಟದ ಚುನಾವಣೆಯಿಂದ ಎಲ್ಲಾ ಹಂತದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದವರು, ಪರಾಜಿತಗೊಂಡವರು, ಕಾಂಗ್ರೆಸ್ ಪಕ್ಷದ ಸದಸ್ಯರು ಸೇರಿ ಎಲ್ಲರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇವೆ.

ಈ ಕಾರ್ಯಕ್ರಮದಲ್ಲಿ ನಿಮಗೆ ಎಲ್ಲಾ ರೀತಿಯ ವ್ಯವಸ್ಥೆ ಕೆಪಿಸಿಸಿ ವತಿಯಿಂದ ಮಾಡಲಾಗುವುದು. ನಿಮ್ಮ ಜವಾಬ್ದಾರಿ ಏನು ಎಂದರೆ ನಿಮ್ಮ ಶಕ್ತಿ ಪ್ರದರ್ಶನ ಮಾಡುವುದು. ನೀವು ಈ ಕಾರ್ಯಕ್ರಮಕ್ಕೆ ಹಣ ಕೊಟ್ಟು ಜನರನ್ನು ಕರೆತರಬಾರದು. ಸ್ವಇಚ್ಛೆಯಿಂದ ಕಾರ್ಯಕರ್ತರನ್ನು ಕರೆತರಬೇಕು. ಪ್ರತಿ ಕ್ಷೇತ್ರದಿಂದ ಕನಿಷ್ಠ 5 ಸಾವಿರ ಜನರನ್ನು ಕರೆತರಬೇಕು. ಸುತ್ತಮುತ್ತಲ ಜಿಲ್ಲೆಯಿಂದ ಹೆಚ್ಚು ಜನರನ್ನು ಕರೆತನ್ನಿ. ಬೆಂಗಳೂರು ಹಾಗೂ ಇತರೆ ಭಾಗಗಳಿಂದ ಕರೆತರುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ" ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT