ಮಂಗಳೂರು: ಶಬರಿಮಲೆ ಸ್ವಾಮಿ ಅಯ್ಯಪ್ಪನ ಪವಾಡ ಕುರಿತ ಕಥೆಗಳು ಸಾಕಷ್ಟು ಇದ್ದು ಈ ಪಟ್ಟಿಗೆ ಇದೀಗ ಕರ್ನಾಟಕದ ಮಂಗಳೂರಿನ ಮೂಕ ಬಾಲಕನ ಸುದ್ದಿ ಕೂಡ ಸೇರ್ಪಡೆಯಾಗಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಯಾತ್ರೆ ಆರಂಭವಾಗಿದ್ದು, ದೇಶದ ಮೂಲೆ ಮೂಲೆಗಳಿಂದ ಅಯ್ಯಪ್ಪ ಸ್ವಾಮಿ ಭಕ್ತರು ಯಾತ್ರೆ ಕೈಗೊಳ್ಳುತ್ತಿದ್ದಾರೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮೂಕ ಬಾಲಕನೋರ್ವ ಅಯ್ಯಪ್ಪ ಸ್ವಾಮಿ ದರ್ಶನದ ಬಳಿಕ ಮಾತನಾಡಿರುವ ಘಟನೆ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಾಮೆತ್ತಡ್ಕ ನಿವಾಸಿ ಪ್ರಸನ್ನ ಎಂಬ ಬಾಲಕ ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಒಂದು ಶಬ್ದ ಕೂಡ ಮಾತನಾಡಲು ಬಾಯಿ ಬರದ ಬಾಲಕ ಪ್ರಸನ್ನ ಒಂದು ವರ್ಷದ ಹಿಂದೆ ಶಬರಿಮಲೆ ಯಾತ್ರೆ ಮಾಡಿದ್ದ. ಈ ಯಾತ್ರೆ ಬಳಿಕ ಬಾಲಕ ಪುಟ್ಟ ಮಕ್ಕಳ ರೀತಿ ತೊದಲು ನುಡಿಗಳನ್ನು ಆಡಲು ಆರಂಭಿಸಿದ್ದು, ಇದನ್ನು ಅಯ್ಯಪ್ಪ ಸ್ವಾಮಿ ಪವಾಡ ಎಂದು ಹೇಳಲಾಗುತ್ತಿದೆ.
ಸಣ್ಣ ಮಕ್ಕಳು ಮೊದ ಮೊದಲಿಗೆ ಯಾವ ರೀತಿ ತೊದಲು ಮಾತನಾಡುತ್ತಾರೆ, ಅದೇ ರೀತಿ ಈ ಬಾಲಕ ಮಾತನಾಡಲು ಆರಂಭಿಸಿದ್ದಾರೆ. ಒಂದು ಶಬ್ದವನ್ನೂ ಸರಿಯಾಗಿ ಮಾತನಾಡದ ಪ್ರಸನ್ನ ಕಳೆದ ವರ್ಷ ಕರುಣಾಮಯಿ ಅಯ್ಯಪ್ಪ ಭಕ್ತವೃಂದ ಪುತ್ತೂರು ಇವರ ತಂಡದಲ್ಲಿ ಅಯ್ಯಪ್ಪ ಮಾಲೆ ಹಾಕಿ, ನಲವತ್ತೆಂಟು ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆ ಏರಿದ್ದ.
ಸುಮಾರು 48 ಮೈಲು ದುರ್ಗಮ ಕಾಡಿನ ಹಾದಿಯಲ್ಲಿ ಸಾಗಿ ಸ್ವಾಮಿ ದರ್ಶನವನ್ನು ಪಡೆದಿದ್ದ ಈ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ ಎಂದು ಪೋಷಕರು ಹೇಳಿದ್ದಾರೆ.
ಪುತ್ತೂರಿನ ಮಹಾಲಿಂಗೇಶ್ವರ ಐಟಿಐ ನಲ್ಲಿ ಎರಡನೇ ವರ್ಷದ ಸಿವಿಲ್ ಡಿಪ್ಲೊಮಾ ಮಾಡುತ್ತಿರುವ ಪ್ರಸನ್ನ, ವರ್ಷದ ಹಿಂದೆ ತನಕ ಒಂದು ಶಬ್ದವನ್ನೂ ಮಾತನಾಡಲಾರದ ಸ್ಥಿತಿಯಲ್ಲಿದ್ದ. ಒಂದು ವರ್ಷಗಳ ಹಿಂದೆ ಒಂದು ಶಬ್ದ ಮಾತನಾಡಲೂ ಚಡಪಡಿಸುತ್ತಿದ್ದ ಈ ಬಾಲಕ ಇಂದು ಅಯ್ಯಪ್ಪ ಸ್ವಾಮಿಯ ಶರಣು ಕರೆಯುತ್ತಾನೆ. ಶಬ್ದಗಳು ಅಷ್ಟು ಸ್ಪಷ್ಟವಾಗಿಲ್ಲದಿದ್ದರೂ, ಅರ್ಥವಾಗುತ್ತದೆ.
ಇದೇ ಕಾರಣಕ್ಕೆ ಬಾಲಕನ ಪೋಷಕರು ಈ ಬಾರಿ ಮತ್ತೆ ಶಬರಿಮಲೆ ಏರಲು ಬಾಲಕ ಪ್ರಸನ್ನಗೆ ಮಾಲೆ ಹಾಕಿಸಿದ್ದು ಈ ಘಟನೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈ ಬಾರಿ ಶಬರಿಮಲೆ ಏರಿದರೆ ಪ್ರಸನ್ನ ಇನ್ನಷ್ಟು ಸ್ಪಷ್ಟವಾಗಿ ಮಾತನಾಡುವ ಸಾಧ್ಯತೆಯಿದೆ ಎಂದು ಹಿರಿಯ ಅಯ್ಯಪ್ಪ ಮಾಲಾಧಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲ ಬಾರಿಗೆ ಮಾಲೆ ಧರಿಸಲು ಬಂದಾಗ ಕೇಳಲು ಮತ್ತು ಮಾತನಾಡಲು ಆಗದ ಸ್ಥಿತಿಯಲ್ಲಿದ್ದ ಪ್ರಸನ್ನನಿಗೆ ಇದೀಗ ಒಂದು ಕಿವಿ ಕೇಳಿಸುತ್ತಿದೆ, ಮಾತನಾಡಲು ಶಬ್ದಗಳು ಹೊರಡುತ್ತಿದೆ. ಮೊದಲ ಬಾರಿಗೆ ಮಾಲೆ ಹಾಕಲು ಬಂದ ಸಂದರ್ಭದಲ್ಲಿ ಕೈ ಸನ್ನೆಯ ಮೂಲಕ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಪ್ರಸನ್ನ ಇದೀಗ ಮಾತನಾಡಲಾರಂಭಿಸಿರುವುದು ಗುರು ಸ್ವಾಮಿಗಳಿಗೆ ಸಂತಸ ತಂದಿದೆ.
ತಮ್ಮ ಹಲವು ವರ್ಷಗಳ ಯಾತ್ರೆಯ ಅನುಭವದಲ್ಲಿ ತಾವು ಇಂತಹ ಹಲವು ಉದಾಹರಣೆಗಳನ್ನು ನೋಡಿದ್ದೇವೆ. ಈ ಸಾಲಿಗೆ ಪ್ರಸನ್ನ ಕೂಡ ಸೇರಿದ್ದು, ಅಯ್ಯಪ್ಪನ ಮಹಿಮೆಯಿಂದ ಎಲ್ಲವೂ ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.