ಬೆಳಗಾವಿ: ಸರಿಯಾಗಿ ಕೊಳವೆ ಬಾವಿ ಮುಚ್ಚದೆ ಇರುವುದರಿಂದ ಅದರೊಳಗೆ ಮಕ್ಕಳು ಬಿದ್ದು ಆಗುವ ದುರಂತ ತಡೆಯುವ ಉದ್ದೇಶದ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ನಿಯಂತ್ರಣ ಕಾಯ್ದೆ 2011ರ (ತಿದ್ದುಪಡಿ) ವಿಧೇಯಕ ಸೇರಿದಂತೆ 8 ವಿಧೇಯಕಗಳನ್ನು ವಿಧಾನಸಭೆಯಲ್ಲಿ ಸೋಮವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ವಿಧೇಯಕ ಅಂಗೀಕಾರ ನಂತರ ಮಾತನಾಡಿದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಹೊಸ ನಿಬಂಧನೆಗಳಡಿ ಸರಿಯಾಗಿ ಕೊಳವೆ ಬಾವಿ ಕೊರೆದು ಮುಚ್ಚದ ಏಜೆನ್ಸಿಗಳಿಗೆ ರೂ. 25,000 ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ಕಡ್ಡಾಯವಾಗಿದೆ. ಸರಿಯಾಗಿ ಕೊಳವೆ ಬಾವಿ ಮುಚ್ಚದ ನಿರ್ಲಕ್ಷ್ಯದಿಂದ ಹಲವು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಈ ತಿದ್ದುಪಡಿಯು ಕಟ್ಟುನಿಟ್ಟಾದ ಹೊಣೆಗಾರಿಕೆ ಖಾತ್ರಿಗೆ ಪ್ರಯತ್ನಿಸುತ್ತದೆ ಎಂದು ಹೇಳಿದರು.
ಸೆಕ್ಷನ್ 11A ಅಡಿಯಲ್ಲಿ, ಅಧಿಸೂಚಿತ ಮತ್ತು ಅಧಿಸೂಚಿತ ಪ್ರದೇಶಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಲು ಉದ್ದೇಶಿಸಿರುವ ಏಜೆನ್ಸಿಗಳು 15 ದಿನಗಳ ಮುಂಚಿತವಾಗಿ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಪಟ್ಟಣ ಪಂಚಾಯಿತಿ, ನಗರಸಭೆ ಅಥವಾ ಬಿಬಿಎಪಿ ವಾರ್ಡ್ ಇಂಜಿನಿಯರ್ ಗಳಿಗೆ ತಿಳಿಸಬೇಕು. ಇಲ್ಲದಿದ್ದರೆ. ರೂ 5,000 ದಂಡ ಮತ್ತು ಮೂರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸಚಿವರ ಕಚೇರಿ ಮಾಹಿತಿ ನೀಡಿದೆ.
"ಬೋರ್‌ವೆಲ್‌ಗಳನ್ನು ಸ್ಟೀಲ್ ಕ್ಯಾಪ್‌ಗಳು, ಮಣ್ಣು ಮತ್ತು ಕಲ್ಲುಗಳಿಂದ ಮತ್ತು ಬೇಲಿಯಿಂದ ಮುಚ್ಚಬೇಕು. ಬೋರ್ ವೆಲ್ ಕೊರೆಯುವ ಏಜೆನ್ಸಿಗಳು 24 ಗಂಟೆಗಳ ಒಳಗೆ ಮುಚ್ಚುವಿಕೆಯನ್ನು ಪರಿಶೀಲಿಸಬೇಕು ಮತ್ತು ಅದರ ಪೋಟೋ ಕೂಡಾ ತೆಗೆಯಬೇಕಾಗುತ್ತದೆ. ಸರಿಯಾದ ರೀತಿಯಲ್ಲಿ ಮುಚ್ಚಿದ ಕುರಿತು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಬೇಕು. ರಿಪೇರಿಗಾಗಿ ಪಂಪ್‌ಗಳನ್ನು ತೆಗೆಯುವಾಗ, ಸುರಕ್ಷತೆಗಾಗಿ ಬೋರ್‌ವೆಲ್‌ಗಳಿಗೆ ತಾತ್ಕಾಲಿಕವಾಗಿ ಮುಚ್ಚಳ ಹಾಕಬೇಕು. ಬೋರ್‌ವೆಲ್ ಮತ್ತೆ ಕಾರ್ಯಾಚರಣೆ ಆರಂಭಿಸುವ ತನಕ ಸುರಕ್ಷತೆ ಖಚಿತಪಡಿಸಿಕೊಳ್ಳಲು ಕಡ್ಡಾಯವಾಗಿ ಕ್ಯಾಪಿಂಗ್ ಅಗತ್ಯವಿದೆ ಎಂದು ಹೇಳಲಾಗಿದೆ.
ಕೊಳವೆ ಬಾವಿ ನಿರ್ಮಾಣ ಸ್ಥಳದಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕಬೇಕು ಮತ್ತು ಅಪಘಾತಗಳನ್ನು ತಡೆಯಲು ಬೇಲಿಗಳನ್ನು ನಿರ್ಮಿಸಬೇಕು ಎಂದು ಹೇಳಿದರು. ಈ ಸಂಬಂಧ ನಿಯಮಗಳನ್ನು ಸೂಕ್ತ ರೀತಿಯಲ್ಲಿ ಅನುಸರಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಿಡಿಒಗಳು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕೊಳವೆ ಬಾವಿಗಳ ಸುರಕ್ಷತಾ ಕ್ರಮಗಳ ಬಗ್ಗೆ ನಾಗರಿಕರಿಗೆ ತಿಳುವಳಿಕೆ ಮೂಡಿಸುವ ಫಲಕಗಳನ್ನು ಪ್ರದರ್ಶಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.
ವಿಧಾನಸಭೆಯ ಅನುಮೋದನೆಯ ನಂತರ, ಈ ಅಧಿವೇಶನದಲ್ಲಿಯೇ ವಿಧಾನ ಪರಿಷತ್ತಿನಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಬೋಸರಾಜು ತಿಳಿಸಿದ್ದಾರೆ.