ಬೆಳಗಾವಿ: ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಚಿವ ಸತೀಶ ಜಾರಕಿಹೊಳಿ ಅವರು ಸೋಮವಾರ ಭರವಸೆ ನೀಡಿದರು.
ಮಾದಿಗ ದಂಡೋರ ಮತ್ತು ಮಾದಿಗ ಮಿಸಲಾತಿ ಹೋರಾಟ ಸಮಿತಿಯ ಸದಸ್ಯರು ಸುವರ್ಣ ವಿಧಾನಸೌಧದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಕುರಿತು ಮಾತನಾಡಿದ ಸಚಿವರು, ಸದಾಶಿವ ಆಯೋಗದ ಶಿಫಾರಸ್ಸುಗಳು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಾಂವಿಧಾನಿಕ ತತ್ವಕ್ಕೆ ಅನುಗುಣವಾಗಿರುತ್ತವೆ. ಒಳಮೀಸಲಾತಿ ಜಾರಿ ಕುರಿತು ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಮೀಸಲಾತಿ ಜಾರಿಗೆ ಸರ್ಕಾರದ ಬದ್ಧವಾಗಿದೆ ಎಂದು ಹೇಳಿದರು.
ಮಾದಿಗ ಸಮುದಾಯವು ತನ್ನ ಹಕ್ಕನ್ನು ಒತ್ತಾಯಿಸುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಬೆಂಬಲ ಸೂಚಿಸಿವೆ. ಅವಕಾಶ ಸಿಕ್ಕಾಗ ಅದನ್ನು ಬಳಸಿಕೊಳ್ಳಲು ಸಮುದಾಯ ಸಿದ್ಧವಾಗಿರಬೇಕು. ಸವಾಲುಗಳು ಎದುರಾದಾಗ ನಿರ್ಣಯಗಳಿಗೆ ಸಮಯ ಬೇಕಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ಸತ್ಯ ಹರಿಶ್ಚಂದ್ರ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಈಗ ನಮ್ಮನ್ನು ಟೀಕಿಸುವವರು ಅಧಿಕಾರದಲ್ಲಿದ್ದಾಗ ಅವರ ನಿಷ್ಕ್ರಿಯತೆಯ ಬಗ್ಗೆ ಯೋಚಿಸಬೇಕು. ಅಧಿಕಾರದಲ್ಲಿದ್ದಾಗ ಅವರೇನು ಮಾಡುತ್ತಿದ್ದರು? ಅವರಿಗೇಕೆ ಸಮಸ್ಯೆ ಪರಿಹರಿಸಲು ಆಗಲಿಲ್ಲ? ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಕಸರತ್ತುಗಳು ನಡೆಯುತ್ತಿವೆ. ಸರ್ಕಾರ ಎಲ್ಲಾ ಪರಿಶಿಷ್ಟ ಜಾತಿ ಸಮುದಾಯಗಳಿಗೆ ನ್ಯಾಯ ಮತ್ತು ಸಮಾನತೆ ಒದಗಿಸಲಿದೆ ಎಂದು ಹೇಳಿದರು.