ಬೆಳಗಾವಿ: ಕಾರ್ಮಿಕರ ಹಿತಾಸಕ್ತಿ ಕಾಪಾಡುವ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ಮಸೂದೆಯನ್ನು ರಾಜ್ಯ ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿತು. ಕಾರ್ಮಿಕ ಕಲ್ಯಾಣ ನಿಧಿಗೆ ನೌಕರರು, ಉದ್ಯೋಗದಾತರು ಮತ್ತು ಸರ್ಕಾರದ ಕೊಡುಗೆಯನ್ನು ಹೆಚ್ಚಿಸುವುದು ಈ ವಿಧೇಯಕದ ಉದ್ದೇಶವಾಗಿದೆ.
ಕಾರ್ಮಿಕ ಕಲ್ಯಾಣ ನಿಧಿಗೆ ಸಂಬಂಧಿಸಿದ ನೌಕರರು, ಉದ್ಯೋಗದಾತರು ಮತ್ತು ರಾಜ್ಯ ಸರ್ಕಾರದಿಂದ ಪಾವತಿಸಬೇಕಾದ ಕೊಡುಗೆ ದರವನ್ನು ಹೆಚ್ಚಿಸಲು ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ 1965ಕ್ಕೆ ತಿದ್ದುಪಡಿ ಅಗತ್ಯವೆಂದು ಪರಿಗಣಿಸಲಾಗಿದೆ.
ಮಸೂದೆ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸದನಕ್ಕೆ ವಿವರ ನೀಡಿದರು. ಕಾರ್ಮಿಕರ ಕಲ್ಯಾಣಕ್ಕೆ ಈ ಮಸೂದೆ ಸಹಾಯ ಮಾಡಲಿದ್ದು, ಸಾಕಷ್ಟು ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು. ಇದೇ ವೇಳೆ ಅಸಂಘಟಿತ ಕಾರ್ಮಿಕರಿಗಾಗಿ ನೀಡಲಾಗುತ್ತಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಸಹ ಸದನಕ್ಕೆ ವಿವರಿಸಲಾಯಿತು.
ಪ್ರಸ್ತುತ ಉದ್ಯೋಗಿ, ಉದ್ಯೋಗದಾತ ಕಂಪನಿ ಮತ್ತು ಸರ್ಕಾರವು ಕಾರ್ಮಿಕ ಕಲ್ಯಾಣ ನಿಧಿಗೆ ಕ್ರಮವಾಗಿ ರೂ 20, ರೂ 20 ಮತ್ತು ರೂ 40 ಪಾವತಿಸುತ್ತಾರೆ. ಹೊಸ ಮಸೂದೆಯು ನೌಕರರು, ಸರ್ಕಾರ ಮತ್ತು ಉದ್ಯೋಗದಾತರ ಕೊಡುಗೆಯನ್ನು ಕ್ರಮವಾಗಿ ರೂ 50, ರೂ 50 ಮತ್ತು ರೂ 100 ಕ್ಕೆ ಹೆಚ್ಚಿಸಲು ಪ್ರಯತ್ನಿಸುತ್ತದೆ. ಉದ್ದೇಶಿತ ಕ್ರಮದಿಂದ ಕಾರ್ಮಿಕ ನಿಧಿಗೆ ಸುಮಾರು ರೂ. 90 ಕೋಟಿ ಸಿಗುವ ಸಾಧ್ಯತೆಯಿದೆ.
ಈ ಮಸೂದೆ ಮೂಲಕ ಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸಾಮಾಜಿಕ ಭದ್ರತಾ ಯೋಜನೆಗಳನ್ನು ಒದಗಿಸುವ ಉದ್ದೇಶವಿದೆ. ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತೇವೆ, ಆರೋಗ್ಯ ಸಮಸ್ಯೆಗಳಿಗೆ ಹಣ ನೀಡುತ್ತಿದ್ದು, ವರ್ಷಗಳಲ್ಲಿ ನಿಧಿ ಗಣನೀಯವಾಗಿ ಹೆಚ್ಚಿದೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.