ಬೆಂಗಳೂರು: ದಿನಗಳು ಕಳೆದಂತೆಲ್ಲಾ ಸೈಬರ್ ವಂಚಕರು ಹೊಸ ಹೊಸ ವೇಷ ತೊಟ್ಟು ವಂಚಿಸುವ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗಿನ ಟ್ರೆಂಡ್‌ನಲ್ಲಿ ಲಾಭದಾಯಕ ಸಹಯೋಗದ ಅವಕಾಶ ನೀಡುವ ಬ್ರ್ಯಾಂಡ್‌ಗಳು ಅಥವಾ ಏಜೆನ್ಸಿಗಳ ಸೋಗಿನಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿಗಳನ್ನು ಅದರಲ್ಲೂ ಮಹಿಳಾ ಪ್ರಭಾವಿಗಳನ್ನು ಗುರಿಯಾಗಿಸಿಕೊಂಡು ವಂಚನೆಗೆ ಮುಂದಾಗಿದ್ದಾರೆ.
ವೃತ್ತಿಪರ ಪಾಲುದಾರಿಕೆಯ ಹೆಸರಿನಲ್ಲಿ ಈ ವಂಚಕರು ಮಹಿಳೆಯರ ವೈಯಕ್ತಿಕ ಮಾಹಿತಿ, ಫೊಟೋಗಳು ಮತ್ತು ವಿಡಿಯೋಗಳನ್ನು ಕೇಳುತ್ತಾರೆ. ಕೃತಕ ಬುದ್ಧಿಮತ್ತೆ (AI) ಮತ್ತು ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು, ಅವುಗಳನ್ನು ತಿರುಚುತ್ತಾರೆ. ನಂತರ ಬ್ಲ್ಯಾಕ್‌ಮೇಲ್ ಅಥವಾ ಸುಲಿಗೆ ಮಾಡುತ್ತಿದ್ದಾರೆ.
ಹೆಚ್ಚುತ್ತಿರುವ ಈ ಪ್ರವೃತ್ತಿ ಬಗ್ಗೆ ಬೆಂಗಳೂರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಕಲಿ ಸಹಯೋಗದ ಅವಕಾಶಗಳೊಂದಿಗೆ ಸಾಮಾಜಿಕ ಮಾಧ್ಯಮದ ಇನ್ಫ್ಲುಯನ್ಸರ್‌ಗಳಿಗೆ ಆಮಿಷ ಒಡ್ಡುವ ಮೂಲಕ ಸೈಬರ್ ಅಪರಾಧಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಎತ್ತಿ ತೋರಿಸಿದ್ದಾರೆ.
ಸೈಬರ್ ವಂಚಕರು ಮೊದಲಿಗೆ ವೈಯಕ್ತಿಕ ಮಾಹಿತಿ, ಫೊಟೋಗಳು ಮತ್ತು ವಿಡಿಯೋಗಳನ್ನು ಸಂಗ್ರಹಿಸುತ್ತಾರೆ. ನಂತರ ಸಂತ್ರಸ್ತರಿಗೆ ಬೆದರಿಕೆ ಹಾಕಲು ಅವುಗಳನ್ನು ತಿರುಚುತ್ತಾರೆ. ಈ ಫೊಟೋ ಅಥವಾ ವಿಡಿಯೋಗಳನ್ನು ಕುಟುಂಬ ಸದಸ್ಯರೊಂದಿಗೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗುವುದು ಎಂದು ಬೆದರಿಕೆಯೊಡ್ಡುವ ಮೂಲಕ ಹಣ ಸುಲಿಗೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸುವುದನ್ನು ತಪ್ಪಿಸಬೇಕು. ಅಂತಹ ಸಂದರ್ಭದಲ್ಲಿ, ನಾಗರಿಕರು ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ '1930' ಅನ್ನು ಸಂಪರ್ಕಿಸಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಇನ್ನೊಬ್ಬ ಹಿರಿಯ ಅಧಿಕಾರಿ TNIE ಜೊತೆಗೆ ಮಾತನಾಡಿ, ಸೈಬರ್ ಅಪರಾಧಿಗಳು ಜಾಹೀರಾತುಗಳು ಮತ್ತು ಸಹಯೋಗಕ್ಕಾಗಿ ನಕಲಿ ಕೊಡುಗೆಗಳೊಂದಿಗೆ ಯುವ ಕಂಟೆಂಟ್ ಕ್ರಿಯೇಟರ್ಸ್‌ಗಳ ಖಾತೆಗಳನ್ನು ಗಮನಿಸುತ್ತಿರುತ್ತಾರೆ. ಹೆಚ್ಚಾಗಿ ಯುವತಿಯರು ಇಂತಹ ವಂಚನೆಗೆ ಗುರಿಯಾಗುತ್ತಾರೆ. ವಂಚಕರು ತಿರುಚಿದ ಚಿತ್ರಗಳು ಅಥವಾ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮ ಅಥವಾ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿ ಸುಲಿಗೆ ಮಾಡುತ್ತಾರೆ. ಇಂತಹ ವಂಚಕರ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಜಾಗರೂಕರಾಗಿರಬೇಕು. ಇವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವ್ಯಕ್ತಿಗಳು ಅಧಿಕೃತ ಚಾನಲ್‌ಗಳ ಮೂಲಕ ನೇರವಾಗಿ ಬ್ರ್ಯಾಂಡ್‌ಗಳು ಅಥವಾ ಏಜೆನ್ಸಿಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಇದಲ್ಲದೆ, ವಂಚಕರು ತಮ್ಮದೇ ಕಂಟೆಂಟ್‌ನ ವಿಡಿಯೋ ಒದಗಿಸುವಂತೆ ಕೇಳುತ್ತಾರೆ. ನಂತರ ಅವುಗಳನ್ನು ತಿರುಚಿ ಸುಲಿಗೆ ಮಾಡಲು ಮುಂದಾಗುತ್ತಾರೆ. ಕೆಲವು ಸಂದರ್ಭಗಳಲ್ಲಿ, ಸ್ಕ್ಯಾಮರ್‌ಗಳು APK ಲಿಂಕ್‌ಗಳನ್ನು ಫಾರ್ಮ್‌ಗಳ ರೂಪದಲ್ಲಿ ಕಳುಹಿಸುತ್ತಾರೆ. ಇವುಗಳನ್ನು ಸೂಕ್ಷ್ಮ ಡೇಟಾವನ್ನು ಕದಿಯಲು ಬಳಸಲಾಗುತ್ತದೆ ಎಂದು ಅಧಿಕಾರಿ ಹೇಳಿದರು.