ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಎಂ ನಿಂಬಾಳ್ಕರ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ಆರಂಭಿಸುವಂತೆ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರು ಮಂಗಳವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ರೂ. 4,000 ಕೋಟಿ ಹಗರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಪರ ಅಧಿಕಾರಿ ಒಲವು ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಶ್ರೇಣಿಯ ಅಧಿಕಾರಿಯಾಗಿರುವ ನಿಂಬಾಳ್ಕರ್, ರಾಜ್ಯ ಗುಪ್ತಚರ ಮುಖ್ಯಸ್ಥರಾಗಿದ್ದಾರೆ. ಅಲ್ಲದೇ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರೂ ಆಗಿದ್ದಾರೆ. ರಾಜಭವನದಲ್ಲಿ ಮನವಿ ಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಬ್ರಹಾಂ, ನಿಂಬಾಳ್ಕರ್ ವಿರುದ್ಧದ ತನಿಖೆಯನ್ನು ಮುಂದುವರಿಸಲು ಸಿಬಿಐಗೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
“ಐಎಂಎ ಹಗರಣದಲ್ಲಿ ನಿಂಬಾಳ್ಕರ್ ವಿರುದ್ಧ ಸಿಬಿಐ ಈಗಾಗಲೇ ಸಾಕ್ಷ್ಯ ಪಡೆದಿದೆ. ನಿಂಬಾಳ್ಕರ್ ಅವರು ಫೆಬ್ರವರಿ 9, 2018 ಮತ್ತು ಜುಲೈ 10, 2019 ರ ನಡುವೆ CID IGP ಆಗಿದ್ದರು. ಈ ಅವಧಿಯಲ್ಲಿ ಹಗರಣ ಬೆಳಕಿಗೆ ಬಂದಿತ್ತು. ನಿಂಬಾಳ್ಕರ್ ಅವರು IMA ಮುಖ್ಯಸ್ಥ ಮೊಹಮ್ಮದ್ ಮನ್ಸೂರ್ ಖಾನ್ ಅವರನ್ನು ಭೇಟಿ ಮಾಡಿರುವ ವಿಷಯ ಸಿಬಿಐಗೆ ತಿಳಿದಿದೆ. ಜನವರಿ 18, 2019 ರಂದು, ನಿಂಬಾಳ್ಕರ್ ಆಗಿನ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದು, ಐಎಂಎ ವಹಿವಾಟಿನ ಬಗ್ಗೆ ಯಾವುದೇ ಅನುಮಾನ ಇಲ್ಲ ತಿಳಿಸಿದ್ದಾರೆ. ಮಾರ್ಚ್ 8, 2019 ರಂದು ಮತ್ತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, IMA ವಿರುದ್ಧದ ತನಿಖೆಯನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದರು.
ನಿಂಬಾಳ್ಕರ್ ತನಿಖಾ ವರದಿಯನ್ನು ಸ್ವೀಕರಿಸಲು ಮತ್ತು ಅನುಮೋದಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಮೇಲೆ ಪ್ರಭಾವ ಬೀರುವ ಮೂಲಕ ಖಾನ್ ಅವರಿಗೆ ಸಹಾಯ ಮಾಡಲು ನಿರ್ಧರಿಸಲಾಗಿದೆ ಎಂಬುದು ಸಿಬಿಐ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ.
ಐಎಂಎ ಹಗರಣ ಸಂಬಂಧ ಆಗಸ್ಟ್ 30, 2019 ರಂದು ಸಿಬಿಐ ದಾಖಲಿಸಿದ ಎಫ್ ಐಆರ್ ನಲ್ಲಿ ನಿಂಬಾಳ್ಕರ್ ಹೆಸರು ಇಲ್ಲ. ಎರಡು ತಿಂಗಳ ನಂತರ, ಫೆಬ್ರವರಿ 1, 2020 ರಂದು ಸಿಬಿಐ ದಾಖಲಿಸಿದ ಮತ್ತೊಂದು ಎಫ್‌ಐಆರ್‌ನಲ್ಲಿ ನಿಂಬಾಳ್ಕರ್ ಅವರ ಹೆಸರಿದೆ. ನಿಂಬಾಳ್ಕರ್ ಹೈಕೋರ್ಟ್ ಮೆಟ್ಟಿಲೇರಿದ ನಂತರ ಅವರ ವಿರುದ್ಧದ ಎಲ್ಲಾ ಆದೇಶಗಳನ್ನು ಹೈಕೋರ್ಟ್ ಮಾರ್ಚ್ 19, 2021 ರಂದು ರದ್ದುಗೊಳಿಸಿತ್ತು.
ನಿಂಬಾಳ್ಕರ್ ವಿರುದ್ಧದ ತನಿಖೆಯಲ್ಲಿ ಸತ್ಯದ ಅಂಶವಿದೆ ಎಂದು ನಿರ್ಧರಿಸಿದ ಸಿಬಿಐ, ಹೈಕೋರ್ಟ್ ಆದೇಶವನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ ಎಂದು ಅಬ್ರಹಾಂ ತಿಳಿಸಿದರು.
ಈಗ ಯಾವುದೇ ತನಿಖೆ ನಡೆಯುತ್ತಿಲ್ಲ. ಕಾಕತಾಳೀಯವೆಂಬಂತೆ ಐಎಂಎ ತನಿಖೆಯ ವೇಳೆ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿದ್ದ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶದ ನಂತರವೂ ಸಿಬಿಐ ಏಕೆ ನಿದ್ದೆ ಮಾಡುತ್ತಿದೆ ಎಂಬುದನ್ನು ಸೂದ್ ಜಗತ್ತಿಗೆ ಹೇಳಬೇಕು. ನಿಂಬಾಳ್ಕರ್ ವಿರುದ್ಧ ಅವರೇಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ನಿಂಬಾಳ್ಕರ್ ವಿರುದ್ಧ ಸಿಬಿಐ ಕ್ರಮಕೈಗೊಳ್ಳುವಂತೆ ರಾಷ್ಟ್ರಪತಿಗೆ ಮನವಿ ಸಲ್ಲಿಸಿರುವುದಾಗಿ ಅವರು ಮಾಹಿತಿ ನೀಡಿದರು.