ನವದೆಹಲಿ: ನಾಡಿನೆಲ್ಲೆಡೆ ಇಂದು ಕ್ರಿಸ್ ಮಸ್ ಧರ್ಮೀಯರ ಪವಿತ್ರ ಹಬ್ಬ ಕ್ರಿಸ್ ಮಸ್ ಆಚರಣೆ ಸಂಭ್ರಮ. ವಿಶ್ವಕ್ಕೆ ಶಾಂತಿ ಮತ್ತು ಸತ್ಯದ ಸಂದೇಶ ಸಾರಿದ ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್ ಹಬ್ಬವನ್ನಾಗಿ ಡಿಸೆಂಬರ್ 25 ರಂದು ಆಚರಿಸಲಾಗುತ್ತದೆ. ಈ ಹಬ್ಬದ ದಿನ ಸಾಂತಾ ಕ್ಲಾಸ್ ವೇಷ ಧರಿಸಿಕೊಂಡು ಪರಸ್ಪರ ಕ್ರಿಸ್ಮಸ್ ಕಾರ್ಡ್, ಉಡುಗೊರೆ ನೀಡುವುದು, ಸಿಹಿ ತಿಂಡಿಗಳನ್ನು ಹಂಚುವುದು ಹಾಗೂ ಚರ್ಚ್ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.
ಕ್ರಿಸ್ ಮಸ್ ಕ್ರೈಸ್ತರಿಗೆ ಬಹುದೊಡ್ಡ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯಾಗಿದೆ. ಇದು ಪ್ರೀತಿ, ತ್ಯಾಗ ಮತ್ತು ಸಹಾನುಭೂತಿಯ ಬೋಧನೆಗಳಿಗೆ ಪೂಜ್ಯನೀಯವಾದ ಯೇಸು ಕ್ರಿಸ್ತನ ಜನನದ ದಿನವಾಗಿದೆ. ಈ ಸಂದರ್ಭದಲ್ಲಿ ಧಾರ್ಮಿಕ ಸೇವೆ, ಪ್ರಾರ್ಥನೆಗಳನ್ನು ಮಾಡಿ ಕ್ಯಾರಲ್ ಗಾಯನ ಹಾಡಲಾಗುತ್ತದೆ.
ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಬೆತ್ಲಹೆಮ್ ನಗರದ, ಹಸುವಿನ ಕೊಟ್ಟಿಗೆಯಲ್ಲಿ ಯೇಸುವು ಮೇರಿ ಮಗನಾಗಿ ಜನಿಸಿದರು. ಯೇಸು ಜನಿಸಿದ ದಿನವನ್ನು ಕ್ರಿಸ್‌ಮಸ್ ಹಬ್ಬವಾಗಿ ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಕ್ರಿಶ್ಚಿಯನ್ ಧರ್ಮಿಯರು ಮಾತ್ರವಲ್ಲದೇ ಪ್ರಪಂಚದಾದ್ಯಂತ ಎಲ್ಲಾ ಜನರು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವುದು ವಿಶೇಷ.
ಕಳೆದೊಂದು ವಾರದಿಂದ ಅಲ್ಲಲ್ಲಿ ಕ್ರಿಸ್ ಮಸ್ ಹಬ್ಬದ ಆಚರಣೆ ಆರಂಭವಾಗಿದೆ. ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಸೋಮವಾರ ಸಂಜೆ 6.30 ಕ್ಕೆ ದೆಹಲಿಯ ಸಿಬಿಸಿಐ ಕೇಂದ್ರದಲ್ಲಿ ಆಯೋಜಿಸಿರುವ ಕ್ರಿಸ್ ಮಸ್ ಆಚರಣೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ದೇಶದ ಕ್ಯಾಥೊಲಿಕ್ ಚರ್ಚ್ಗಳ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಕ್ರಿಸ್ಮಸ್ ಹಬ್ಬದ ಕಾರ್ಯಕ್ರಮದಲ್ಲಿ ಪ್ರಧಾನಿಯೊಬ್ಬರು ಭಾಗವಹಿಸುತ್ತಿರುವುದು ಇದೇ ಮೊದಲು.
ಡಿಸೆಂಬರ್ 19 ರಂದು ಪ್ರಧಾನಿ ಮೋದಿ ಕೇಂದ್ರ ಸಚಿವ ಜಾರ್ಜ್ ಕುರಿಯನ್ ಅವರ ನಿವಾಸದಲ್ಲಿ ನಡೆದ ಕ್ರಿಸ್ ಮಸ್ ಆಚರಣೆಯಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಕ್ರಿಶ್ಚಿಯನ್ ಸಮುದಾಯದ ಪ್ರಮುಖ ಸದಸ್ಯರೊಂದಿಗೆ ಸಂವಾದ ನಡೆಸಿದ ಅವರು ಒಳಗೊಳ್ಳುವಿಕೆ ಮತ್ತು ಆಚರಣೆಯ ಮನೋಭಾವವನ್ನು ಒತ್ತಿಹೇಳಿದರು.
ಮಕ್ಕಳಿಗೆ ವಿಶೇಷ: ಕ್ರಿಸ್ ಮಸ್ ಹಬ್ಬವೆಂದರೆ ಮಕ್ಕಳಿಗೆ ವಿಶೇಷ, ಅದರಲ್ಲೂ ನಗರ ಪ್ರದೇಶಗಳಲ್ಲಿ ಕೇಕ್, ಚಾಕಲೇಟ್ ವಿನಿಮಯ ಜೋರಾಗಿರುತ್ತದೆ. ಸಾಂತಾ ಕ್ಲಾಸ್ ವೇಷ ಧರಿಸಿ ಬಂದು ಮಕ್ಕಳಿಗೆ ಉಡುಗೊರೆ ನೀಡುವ ಪ್ರತೀತಿ ನಗರ ಪ್ರದೇಶಗಳಲ್ಲಿ ಹೆಚ್ಚಾಗಿರುತ್ತದೆ.
ಬೆಂಗಳೂರು, ಪಣಜಿ, ದೆಹಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಚರ್ಚ್ ಗಳಲ್ಲಿ ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬೆಂಗಳೂರಿನ ಸೇಂಟ್ ಫ್ರಾನ್ಸಿಸ್ ಜೇವಿಯರ್ಸ್ ಕ್ಯಾಥೆಡ್ರೆಲ್ ಚರ್ಚ್ ನಲ್ಲಿ ಮಧ್ಯರಾತ್ರಿ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.