ಚಿತ್ರದುರ್ಗ: ಒಳಚರಂಡಿ ದುರಸ್ತಿ ಕಾರ್ಮಿಕ ಉಸಿರುಗಟ್ಟಿ ಸಾವನ್ನಪ್ಪಿರುವ ಭೀಕರ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಡಿಸೆಂಬರ್ 18ರಂದು ನಡೆದಿದ್ದ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ಕಾರ್ಮಿಕನನ್ನು ಚಳ್ಳಕೆರೆಯ ಗಾಂಧಿನಗರ ಬಡಾವಣೆಯ ರಂಗಸ್ವಾಮಿ (48) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಒಳಚರಂಡಿ ಕಟ್ಟಿಕೊಂಡಿದ್ದರಿಂದ ರಾಘವೇಂದ್ರ ಕಲ್ಯಾಣ ಮಂಟಪದ ಮಾಲೀಕ ಅದರ ದುರಸ್ತಿಗಾಗಿ ರಂಗಸ್ವಾಮಿಯನ್ನು ಕರೆಸಿದ್ದರು. ಆದರೆ ದುರಸ್ತಿಗಾಗಿ ಒಳಚರಂಡಿಗೆ ಇಳಿದ ಆತ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಆರಂಭದಲ್ಲಿ ಆತ ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಎಂದು ಹೇಳಲಾಗಿತ್ತು. ಆದರೆ ಬಳಿಕ ಸಫಾಯಿ ಕರ್ಮಚಾರಿಗಳ ಸೇವಾ ಸಮಿತಿ ಈ ಬಗ್ಗೆ ಡಿಸಿ ಕಚೇರಿಗೆ ದೂರು ಸಲ್ಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ದೂರು ಆಧರಿಸಿ ನಗರಸಭೆ ಕಂದಾಯ ನಿರೀಕ್ಷಕ ಗುರುಪ್ರಸಾದ್ ಸ್ಥಳ ಪರಿಶೀಲನೆ ನಡೆಸಿದಾಗ ರಂಗಸ್ವಾಮಿ ಉಸಿರುಗಟ್ಟಿ ಸಾವನ್ನಪ್ಪಿರುವುದು ಸ್ಪಷ್ಟವಾಗಿದೆ. ಇದೀಗ ಕಲ್ಯಾಣ ಮಂಟಪದ ಮಾಲೀಕ ಗುರುವೀರ ನಾಯಕ್ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಗೆ ನಗರಸಭೆ ಅಧಿಕಾರಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.