ಮೈಸೂರು: ಇತ್ತೀಚೆಗಷ್ಟೇ ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ಡಾ. ಬಿ.ಆರ್.ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯನ್ನು ವಿರೋಧಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಚಾಮರಾಜನಗರ ಬಂದ್ ಆಚರಿಸಲು ನಿರ್ಧರಿಸಿವೆ.
ದಲಿತ ಮುಖಂಡ ವೆಂಕಟರಮಣಸ್ವಾಮಿ ಮಾತನಾಡಿ, ವಿವಿಧ ಸಂಘಟನೆಗಳು, ಉದ್ಯಮಿಗಳು, ತಮಿಳು ಸಂಗಮ, ವರ್ತಕರು, ಬಸ್ ಮತ್ತು ಹೋಟೆಲ್ ಮಾಲೀಕರು, ರೈತ ಸಂಘಟನೆಗಳು, ಬಾರ್ ಕೌನ್ಸಿಲ್ ಸದಸ್ಯರು, ಮುಸ್ಲಿಂ ಸಂಘಟನೆಗಳ ಜೊತೆ ಮಾತುಕತೆ ನಡೆಸಿ ಡಿ.27ರಂದು ಬಂದ್ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ದೇಶದ ಆಸ್ತಿಯಾಗಿದ್ದು, ವಿಶ್ವವೇ ಮೆಚ್ಚುವಂತಹ ಸಂವಿಧಾನ ನೀಡಿರುವ ಮಹಾನ್ ಜ್ಞಾನಿ. ಇಂಥ ಮಹಾನ್ ಪುರುಷರ ಹೆಸರು ಹೇಳುವ ಯೋಗ್ಯತೆ ಅಮಿತ್ ಶಾಗೆ ಇಲ್ಲ. ಅಂಬೇಡ್ಕರ್ ವಿರುದ್ಧದ ಹೇಳಿಕೆ ದಲಿತ ಸಮುದಾಯಕ್ಕೆ ಮಾತ್ರವಲ್ಲ ಸರ್ವ ಜನಾಂಗಕ್ಕೂ ಅಪಮಾನವಾಗಿದೆ. ಕೂಡಲೇ ಅಮಿತ್ ಶಾ ದೇಶದ ಜನರ ಕ್ಷಮೆ ಕೋರಬೇಕು. ಸಂಪುಟದಿಂದ ಅವರನ್ನು ವಜಾಗೊಳಿಸಬೇಕು. ಹೇಳಿಕೆ ವಿರುದ್ದ ಜಿಲ್ಲೆಯಲ್ಲಿ ಬಂದ್ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದರು.