ಬೆಂಗಳೂರು: ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ (ಕೆಎಸ್ಡಿಎಲ್) ಖರೀದಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಅಮೃತ್ ಸಿರಿಯೂರು ಮಹಾಲಕ್ಷ್ಮಿ ಲೇಔಟ್‌ನ ಮುನೇಶ್ವರ ಬ್ಲಾಕ್ ನಿವಾಸಿಯಾಗಿದ್ದು, ಕೆಎಸ್ ಡಿಎಲ್ ಖರೀದಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.ಡಿ. 28ರ ಸಂಜೆ 5ಗಂಟೆ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಪರಿಶೀಲನೆ ನಡೆಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾತನಾಡಿ, ಕೆಎಸ್ಡಿಎಲ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರು ಬಂದಿತ್ತು. ಮನೆ ಮಾಲೀಕ ಗಿರೀಶ್ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ರು. ನಂತರ ಠಾಣೆ ಸಿಬ್ಬಂದಿ ಹೋಗಿ ಪರಿಶೀಲನೆ ನಡೆಸಿದ್ದಾರೆ. ಅಮೃತ್ ಸಿರಿಯೂರು ನೆಲಮಹಡಿಯಲ್ಲಿ ಒಂಟಿಯಾಗಿ ವಾಸವಿದ್ದು, ಶನಿವಾರ ಸಂಜೆ ಡ್ರಾಯಿಂಗ್ ರೂಂನಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದ ಡೆತ್ ನೋಟ್ ಕೈಯಲ್ಲಿ ಹಿಡಿದಿದ್ದರು.
ಅವರ ಮೊದಲ ಪತ್ನಿ ತೀರಿಕೊಂಡ ನಂತರ, ಸಿರಿಯೂರು 2019 ರಲ್ಲಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದರು, ಆದರೆ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಮತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು, ಅದು ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಉಳಿದಿತ್ತು. ಕೌಟುಂಬಿಕ ಸಮಸ್ಯೆಯಿಂದ ಈತ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ ಎಂದು ಮಹಾಲಕ್ಷ್ಮಿ ಲೇಔಟ್ ಪೊಲೀಸರು ತಿಳಿಸಿದ್ದಾರೆ.