ರಾಜ್ಯ

ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಕಡಿವಾಣ ಹಾಕಲು BMRCL ಮುಂದು: ಅಸಭ್ಯ ವರ್ತನೆ ಮಾಡಿದವರಿಗೆ 10,000 ರೂ. ದಂಡ!

Manjula VN

ಬೆಂಗಳೂರು: ಮಹಿಳಾ ಪ್ರಯಾಣಿಕರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಮಂಡಳಿಯು, ದಂಡದ ಮೊತ್ತವನ್ನು ಬರೋಬ್ಬರಿ ಶೇ.20 ಪಟ್ಟು ಹೆಚ್ಚಿಸಿದೆ.

ಅಸಭ್ಯ ವರ್ತನೆಗೆ ಈ ಮೊದಲು ರೂ.500 ಇದ್ದ ದಂಡವನ್ನು ರೂ.10,000ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದು, ಇದರ ಮಧ್ಯೆ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣ ಕಳೆದ ತಿಂಗಳು (ಜ.2) ವರದಿಯಾಗಿತ್ತು. ಈ ವೇಳೆ ತಪ್ಪಿತಸ್ಥನಿಗೆ ಮೆಟ್ರೋ (ಕಾರ್ಯಾಚರಣೆ ಮತ್ತು ನಿರ್ವಹಣೆ) 2002ರ ಆ್ಯಕ್ಟ್ ಸೆಕ್ಷನ್‌ 59, 60, 64ರ ಅಡಿ ರೂ.10,000 ದಂಡ ವಿಧಿಸಲಾಗಿತ್ತು.

ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿರುವ ಬಗ್ಗೆ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕೆಲ ದಿನಗಳ ಹಿಂದಷ್ಟೇ ಮೆಟ್ರೋ ಪ್ರಯಾಣದ ವೇಳೆ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಅಸಭ್ಯ ವರ್ತನೆ ತೋರಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಪದೇಪದೇ ಈ ರೀತಿಯ ವರ್ತನೆಗಳು ಮರುಕಳಿಸಿದ್ದರಿಂದ ಮಹಿಳಾ ಪ್ರಯಾಣಿಕರು ಬೇಸತ್ತು ಹೋಗಿದ್ದರು. ಹೀಗಾಗಿ, ಅನುಚಿತವಾಗಿ ವರ್ತಿಸುವವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ.

SCROLL FOR NEXT