ರಾಜ್ಯ

ಆರ್ಥಿಕ ತಾರತಮ್ಯದ ಸುಳ್ಳು ಕಂತೆ ಹೊತ್ತು 'ಚಲೋ ದಿಲ್ಲಿ'; ಸುಳ್ಳು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸಿ ವಂಚನೆ: ವಿಜಯೇಂದ್ರ

Shilpa D

ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸಲು ಸಾಧ್ಯವಾಗದೇ, ಆರ್ಥಿಕ ಸಮತೋಲನ ಕಾಯ್ದು ಕೊಳ್ಳುವಲ್ಲಿ ವಿಫಲವಾಗಿ ಬೊಕ್ಕಸ ಬರಿದು ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ, ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ತೆರಿಗೆ ಬಾಕಿಯ ನೆಪ ಮಾಡಿಕೊಂಡು ಕೇಂದ್ರ ಸರ್ಕಾದ ವಿರುದ್ಧ ಪ್ರತಿಭಟಿಸಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ .ವೈ ವಿಜಯೇಂದ್ರ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು,  ಸುಳ್ಳು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುವುದೂ ಕೂಡ ವಂಚನೆಯ ಇನ್ನೊಂದು ಮುಖ. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಲಿದೆ, ಕಾಂಗ್ರೆಸ್ ಸರ್ಕಾರದ ಬಂಡವಾಳ ಸಾಕ್ಷಿ ಸಮೇತ ಬಯಲಿಗೆಳೆಯಲಿದೆ.

ಸುಮಾರು 60 ವರ್ಷಗಳ ಕಾಲ ಈ ದೇಶವನ್ನಾಳಿದ ಕಾಂಗ್ರೆಸ್ ‘ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ’ ಎನ್ನುವಂತೆ ನಿರಂತರವಾಗಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಿ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯಗಳನ್ನು ಎಸಗಿರುವುದಕ್ಕೆ ಇತಿಹಾಸದ ಪುಟಗಳಲ್ಲಿ ದಾಖಲೆ ಇದೆ, ಇದನ್ನೆಲ್ಲ ಇಷ್ಟರಲ್ಲೇ ಪುಂಖಾನುಪುಂಖವಾಗಿ ನಾವೂ ಬಿಚ್ಚಿಟ್ಟು ಕಾಂಗ್ರೆಸ್ ನ ಅಸಲೀ ಮುಖವಾಡ ಕನ್ನಡಿಗರ ಮುಂದೆ ಕಳಚಿಡಲಿದ್ದೇವೆ.

‘ಸ್ವಾವಲಂಬಿ ಬಲಿಷ್ಠ ಭಾರತ ನಿರ್ಮಾಣ’ದ ಮಹಾ ಸಂಕಲ್ಪ ತೊಟ್ಟಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕರ್ನಾಟಕವೇ ಸ್ಫೂರ್ತಿ. ಅಣ್ಣ ಬಸವಣ್ಣ ನವರ ಕಾಯಕ ತತ್ವವೇ ಪ್ರೇರಣೆ. ಇದಕ್ಕೆ ‘ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ’ ಸಾಕ್ಷಿ ಸಂಕೇತವಾಗಿದೆ.

ಸಮೃದ್ಧ ಕರ್ನಾಟಕ ಮೋದಿ ಜೀ ಅವರ ಆದ್ಯತೆಯಾಗಿರುವಾಗ ‘ಆರ್ಥಿಕ ತಾರತಮ್ಯದ ಸುಳ್ಳು ಕಂತೆ ಹೊತ್ತು ‘ಚಲೋ ದಿಲ್ಲಿ’ ಬದಲು ಬರಗಾಲದಿಂದ ತತ್ತರಿಸಿರುವ ರೈತರ ಕಣ್ಣೀರೊರೆಸಿ ಪರಿಹಾರ ನೀಡಲು ‘ಚಲೋ ಹಳ್ಳಿ’ ಕಾರ್ಯಕ್ರಮ ಆರಂಭಿಸಿ ನಿಮ್ಮೊಂದಿಗೆ ನಾವೂ ಬರುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

SCROLL FOR NEXT