ರಾಜ್ಯ

ಬೆಂಗಳೂರಿನಲ್ಲಿ 2 ಪಿಟ್‌ಬುಲ್ ನಾಯಿಗಳ ದಾಳಿ: ಉದ್ಯಮಿಗೆ ಗಂಭೀರ ಗಾಯ, ಮಾಲೀಕರ ವಿರುದ್ಧ ಪ್ರಕರಣ ದಾಖಲು

Manjula VN

ಬೆಂಗಳೂರು: ಉದ್ಯಮಿಯೊಬ್ಬರ ಮೇಲೆ 2 ಪಿಟ್‌ಬುಲ್‌ಗಳು ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿರುವ ಘಟನೆಯೊಂದು ನಗರದ ವರ್ತೂರಿನಲ್ಲಿ ಫೆ.6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಾಯಿ ದಾಳಿಗೊಳಗಾದ ಉದ್ಯಮಿಯನ್ನು ಚಂದ್ರಶೇಖರ್ (49) ಎಂದು ಗುರ್ತಿಸಲಾಗಿದೆ. ಇವರು ವರ್ತೂರಿನ ಬಳಗೆರೆಯ ನಿವಾಸಿಯಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರ್ಕಾರಿ ಶಾಲೆಯ ಎದುರಿನ ಬಳಗೆರೆ ರಸ್ತೆಯಲ್ಲಿರುವ ಜಮೀನು ಬಳಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಶ್ರೀನಿವಾಸ ಮತ್ತು ಮುನೇಶ್ ವಿರುದ್ಧ ಶನಿವಾರ ಪೊಲೀಸ್ ದೂರು ದಾಖಲಿಸಿಕೊಂಡಿದ್ದಾರೆ.

ನಾಯಿಗಳ ದಾಳಿಗೊಳಗಾದ ಚಂದ್ರಶೇಖರ್ ಅವರು ಮಾತನಾಡಿ, ಇಂತಹ ಅಪಾಯಕಾರಿ ಪ್ರಾಣಿಗಳನ್ನು ಯಾರೂ ಸಾಕಬಾರದು. ಭೂಮಿ ಜಂಟಿ ಆಸ್ತಿಯಾಗಿರುವುದರಿಂದ ನನ್ನ ಚಿಕ್ಕಪ್ಪ ಜಮೀನಿನಲ್ಲಿದ್ದ ಮನೆಯನ್ನು ಬಾಡಿಗೆಗೆ ನೀಡಿದ್ದರು. ಬಾಡಿಗೆಗೆ ಇದ್ದವರು ಎರಡು ನಾಯಿಗಳನ್ನು ಸಾಕಿದ್ದರು. ನನ್ನ ಮನೆಯವರು ಆಗಾಗ್ಗೆ ಜಮೀನಿಗೆ ಭೇಟಿ ನೀಡುತ್ತಿದ್ದರು. ಹೀಗಾಗಿ ನಾಯಿಗಳಿಗೆ ಸರಪಳಿ ಹಾಕುವಂತೆ ತಿಳಿಸಲಾಗಿತ್ತು. ಆದರೆ, ಅವರು ನಮ್ಮ ಸೂಚನೆಯನ್ನು ಪಾಲಿಸಿರಲಿಲ್ಲ.

ಜಮೀನಿನಲ್ಲಿ ಎಳನೀರು ಕೀಳಲು ಬಂದಿದ್ದ ವ್ಯಕ್ತಿಯೆ ಸಹಾಯ ಮಾಡಲು ನಾನು ಸ್ಥಳಕ್ಕೆ ಹೋಗಿದ್ದೆ. ಈ ವೇಳೆ ಹಿಂಬದಿಯಿಂದ ಬಂದ ನಾಯಿಗಳು ನನ್ನ ಮೇಲೆ ದಾಳಿ ನಡೆಸಿತ್ತು. ಸಹಾಯಕ್ಕಾಗಿ ಕಿರುಚಲು ಆರಂಭಿಸಿದಾಗ ಸ್ಥಳಕ್ಕೆ ಬಂದ ನಾಯಿಗಳ ಮಾಲೀಕರು, ನಾಯಿಗಳನ್ನು ಎಳೆದರು. ನಾಯಿಗಳು ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. 6 ಸೆಂ.ಮೀನಷ್ಟು ಆಳದಲ್ಲಿ ಗಾಯವಾಗಿದೆ. ಬಳಗೆರೆ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದೇನೆ. ನಾಯಿ ದಾಳಿ ಮಾಡಿದ ಕೆಲವೇ ದೂರದಲ್ಲಿ ನನ್ನ ಮಗನಿದ್ದ. ಅದೃಷ್ಟವಶಾತ್ ಅವನ ಮೇಲೆ ದಾಳಿಯಾಗಿಲ್ಲ. ಇದೀಗ ಪೊಲೀಸರಿಗೆ ದೂರು ನೀಡಿದ್ದೇನೆಂದು ಹೇಳಿದ್ದಾರೆ.

ಇದೀಗ ಚಂದ್ರಶೇಖರ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು, ಶ್ರೀನಿವಾಸ ಹಾಗೂ ಮುನೇಶ್ ವಿರುದ್ಧ ನಿರ್ಲಕ್ಷ್ಯ ವರ್ತನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

SCROLL FOR NEXT