ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ 
ರಾಜ್ಯ

ಶೇ.40 ಕಮಿಷನ್ ಆರೋಪ: ತನಿಖೆ ವಿಳಂಬವಾಗುತ್ತಿರುವುದೇಕೆ: ಸಿಎಂ ಸಿದ್ದರಾಮಯ್ಯಗೆ ಬೊಮ್ಮಾಯಿ ಪ್ರಶ್ನೆ

Manjula VN

ಹುಬ್ಬಳ್ಳಿ: ಶೇ 40ರಷ್ಟು ಕಮಿಷನ್ ಅವ್ಯವಹಾರ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶೀಘ್ರಗತಿಯಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂದು ಬುಧವಾರ ಒತ್ತಾಯಿಸಿದರು.

ಹಾವೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, 'ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಳಿ ಬಂದಿದ್ದ ಶೇ. 40 ಕಮಿಷನ್ ಕುರಿತ ತನಿಖೆಯನ್ನು ಅನಗತ್ಯ ವಿಳಂಬ ಮಾಡುತ್ತಿರುವ ಬಗ್ಗೆ ಹೈಕೋರ್ಟ್ ಗಮನಿಸಿ ಆರು ವಾರದಲ್ಲಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ’ ಎಂದು ಹೇಳಿದರು.

‘‘ಸರ್ಕಾರದಲ್ಲಿ ಹಣ ಇಲ್ಲದಿರುವುದಕ್ಕೆ ಈ ರೀತಿಯ ಕಮಿಷನ್ ಮಾಡಿಕೊಂಡು ಕುಳಿತಿದ್ದೀರಿ, ಆರು ವಾರದಲ್ಲಿ ವರದಿ ನೀಡದಿದ್ದರೆ, ಹಣ ಬಿಡುಗಡೆಗೆ ನಾವೇ ನಿರ್ದೇಶನ ನೀಡಬೇಕಾಗುತ್ತದೆ’ ಎಂದು ಕೋರ್ಟ್ ಹೇಳಿದೆ. ಸರಕಾರ ಈಗಲಾದರೂ ನಾಚಿಕೆ ಬಿಟ್ಟು ಎಚ್ಚೆತ್ತುಕೊಳ್ಳಬೇಕು’ ಎಂದು ತಿಳಿಸಿದರು.

ಇದೇ ವೇಳೆ ತಮ್ಮ ಆರೋಪ ಕುರಿತು ಕೆಂಪಣ್ಣ ಅವರು ಯೂಟರ್ನ್ ಹೊಡೆದಿರುವ ಕುರಿತು ಮಾತನಾಡಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಮೇಲೆ ಒತ್ತಡ ಇದ್ದು, ಅವರ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ. ಹೀಗಾಗಿ ಅವರು ಸರ್ಕಾರದ ಪರವಾಗಿ ಮಾತನಾಡುತ್ತಿದ್ದಾರೆ. ಆ ರೀತಿ ಮಾತನಾಡುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಬಾಯಲ್ಲಿ ಹಸಿ ಸುಳ್ಳನ್ನು ಹೇಳಿಸಿದ್ದಾರೆ. ಹಿಂದಿನ ಸರ್ಕಾರದ ಸಾಧನೆಗಳನ್ನು ತನ್ನ ಸಾಧನೆ ಎಂದು ಸರ್ಕಾರ ಹೇಳಿಕೊಂಡಿದೆ. ಈ ಸರ್ಕಾರ ಯಾವುದೇ ಸಾಧನೆ ಮಾಡಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದರು.

SCROLL FOR NEXT